Slide
Slide
Slide
previous arrow
next arrow

ಸ್ವರ್ಣವಲ್ಲೀ ಶ್ರೀಗಳು ಹೇಳಿದ ಸರಳ ಸೂತ್ರ: ಇಷ್ಟ ದೇವರ ನಾಮ ಸ್ಮರಣೆ ಮಾಡಿ, ಕಷ್ಟ ಪರಿಹರಿಸಿಕೊಳ್ಳಿ

300x250 AD

ಶಿರಸಿ: ಇಷ್ಟದ ದೇವರ ನಾಮ ಸ್ಮರಣೆ ಸದಾ ಮಾಡಿ ಕಷ್ಟ ಹೇಳಿಕೊಳ್ಳಬೇಕು. ಆಗ ನಮ್ಮ ಕಷ್ಟಗಳೂ ಕರಗುತ್ತವೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.

ಸ್ವರ್ಣವಲ್ಲೀಯಲ್ಲಿ 32 ನೇ ಚಾತುರ್ಮಾಸ್ಯ ವೃತ ಸಂಕಲ್ಪಿಸಿದ ಶ್ರೀಗಳ ಪಾದಪೂಜೆ, ವಿವಿಧ ಸೇವೆ, ಕುಂಕುಮಾರ್ಚನೆ, ಗಾಯತ್ರೀ ಜಪಾನುಷ್ಠಾನ ನಡೆಸಿದ ಕರೂರು ಸೀಮಾ ಭಜಕರಿಗೆ ಆಶೀರ್ವಚನ ನುಡಿದರು.

ಶ್ರೀಕೃಷ್ಣನ ಜನ್ಮೋತ್ಸವ ದೇಶದಲ್ಲಿ ಮಾತ್ರವಲ್ಲ, ವಿಶ್ವದೆಲ್ಲೆಡೆ ನಡೆಯುತ್ತದೆ. ಕೃಷ್ಣನ ಪೂಜೆ ಬಿಟ್ಟರೆ ಹೆಚ್ಚು ನಡೆಯುವದು ನಾಮ ಕೀರ್ತನೆಯೇ. ನಾಮ ಸಾಧನೆಗೆ ಪರ್ವ ಕಾಲ ಜನ್ಮಾಷ್ಠಮಿ ಎಂದ ಶ್ರೀಗಳು, ನಮಗೆ ಯಾವ ದೇವರು ಇಷ್ಟವೋ ಆ ದೇವರ ನಾಮ ಮಂತ್ರ ಮಾಡಬೇಕು ಎಂದರು.

ಕೆಲವರಿಗೆ ರಾಮನ ಮಂತ್ರ, ರಾಮ ತಾರಕ ಮಂತ್ರ , ಶಿವ ಎಂದರೆ ಕೆಲವರಿಗೆ ಶಿವ ಎಂಬ ಬೇರೆ ಬೇರೆ ಮಂತ್ರ ಇದೆ. ದೇವಿ, ಗಣಪತಿ ಎಂದರೆ ಇಷ್ಟ, ಯಾರಿಗೆ ಯಾವ ದೇವರು ಇಷ್ಟವೋ ಆ ದೇವರ ಮಂತ್ರ ದಿನವೂ ಜಪಿಸಬೇಕು. ನಾಮಕ್ಕೂ ನಾಮಿಗಳೆರಡೂ ಅಬೇಧ. ಆ ನಾಮ ಬಂದ ತಕ್ಷಣ ಅವನ ನೆನಪಾಗುತ್ತದೆ. ಎಷ್ಟು ಸಲ ಉಚ್ಛರಿಸಿದರೂ ಅಷ್ಟು ಸಲ ಭಗವಂತ ನೆನಪಾಗಬೇಕು. ನಾವೂ ನೆನಪಿಸಿ ನಾಮ ಹೇಳಬೇಕು ಎಂದರು.

ನಾಮ ಇನ್ನೊಂದು ಉಪಯೋಗ ಎಂದರೆ ಯಾವ ದೇವರ ಹೆಸರು ಹೇಳಿದರೂ ಆ ಭಗವಂತನ ದೃಷ್ಟಿ ನಮ್ಮ ಕಡೆ ಗಮನ ಸೆಳೆಯುತ್ತದೆ. ಪರಸ್ಪರ ಇಬ್ಬರನ್ನೂ ಭೇಟಿ ಮಾಡಿಸುವದೇ ನಾಮ ಸೂತ್ರ ಎಂದ ಶ್ರೀಗಳು, ದೇವರು ನೂರಾರು ಜನರು ಕರೆದಾಗ ಯಾರ ಕಡೆ ಗಮನಿಸುತ್ತಾನೆ ಎಂದು ಕೇಳುವವರು ಇದ್ದಾರೆ. ಅವನಿಗೆ ಎಲ್ಲರಿಗೂ ಸ್ಪಂದಿಸುವ ಸಾಮರ್ಥ್ಯ  ಇದೆ. ಅನೇಕರಿಗೆ ಏಕಕಾಲದಲ್ಲಿ ಒದಗಿ ಬರಬಲ್ಲ ಸಾಮರ್ಥ್ಯ ಇದೆ  ಎಂದರು.

300x250 AD

ನಾವು ಭಗವಂತನನ್ನು ಕರೆದರೆ ಅವನಿಗೆ ಯಾವ ತ್ರಾಸೂ ಇಲ್ಲ. ನಮ್ಮ ತೊಂದರೆ, ತ್ರಾಸು ಹೇಳಿಕೊಂಡರೆ ಕಷ್ಟ ಕರಗುತ್ತದೆ. ಇಡೀ ಜಗತ್ತಿಗೆ ಭಗವಂತ ಆಧಾರ. ಆನಂದ ಘನ. ಜಗತ್ತಿಗೆ ಆಧಾರ ಆಗಿದ್ದರೂ ಪ್ರತಿಯೊಬ್ಬರಿಗೂ ಒದಗಿ ಬರಬಲ್ಲ ಎಂದ ಶ್ರೀಗಳು,  ಸ್ಮರಣೆ  ಮಾಡಿದಾಗ ಭಗವಂತ ಗಮನಿಸುತ್ತಾನೆ. ಭಕ್ತನ ಕಡೆ ನೋಡುತ್ತಾನೆ. ಇದೇ ವೇಳೆ ಭಕ್ತನ ಭಗವಂತನ ಸಂಬಂಧ ಏರುತ್ತದೆ. ಅದನ್ನು ಭಕ್ತನೂ ಬೆಳಸಿಕೊಳ್ಳಬೇಕು. ಅದು ಕ್ರಮೇಣ ಧ್ಯಾನದ ಸ್ಥಿತಿಯತ್ತ ಕರೆದುಕೊಂಡು ಹೋಗುತ್ತದೆ ಎಂದರು.

ಯಾವ ಧ್ಯೇಯ ಇಟ್ಟುಕೊಂಡಿದ್ದೇವೋ ಆ ಚಿಂತನೆಯಲ್ಲಿ ಮನಸ್ಸು ಏಕಾಗೃತೆಗೊಳಿಸಬೇಕು. ಹರಿವ ನದಿ ನೀರು ಹರಿದಂತೆ ಅಣೇಕಟ್ಟು ಕಟ್ಟಿದಾಗ ನಿಲ್ಲುತ್ತದೆ ನೀರು. ಹಾಗೇ ಮನಸ್ಸು ನಿಲ್ಲಿಸಬೇಕು. ಮನಸ್ಸು ಹರಿಯಲು ಬಿಡಬಾರದು. ಭಗವಂತನ ನಾಮ ಸ್ಮರಣೆಯ ಮೂಲಕ ಮನಸ್ಸಿಗೆ ಆಣೇಕಟ್ಟು ಕಟ್ಟಬೇಕು. ಆಗ ಆನಂದ ಎಂಬ ಬೆಳೆ ಬೆಳೆಯುತ್ತದೆ ಎಂದರು.

ಸಮಸ್ಯೆ ಅರ್ಥ ಆಗದೇ ಇದ್ದರೆ ಪರಿಹಾರ ಆಗದು. ಮನಸ್ಸು ಚಂಚಲ ಎಂಬುದು ಗೊತ್ತಾಗದೇ ಪರಿಹಾರ ಇಲ್ಲ. ಚಂಚಲತೆ ಇದ್ದವನಿಗೆ ನಿಶ್ಚಲತೆ ಗೊತ್ತಾಗುವದಿಲ್ಲ. ಚಿಕ್ಕ ವಯಸ್ಸಿನಲ್ಲಿ ಗೊತ್ತಾಗದೇ ಹೋದರೂ ಪ್ರೌಢ ವಯಸ್ಸಿಗೆ ಗೊತ್ತಾಗುತ್ತದೆ.  ಭಗವಂತನಲ್ಲಿ ನಿನ್ನೊಳಗೆ ಮನಸ್ಸಿಡುವಂತೆ ಪ್ರೇರಣೆ ಕೊಡು ಎಂದೂ ಕೇಳಿಕೊಳ್ಳಬೇಕು. ಆಗಲೂ ಏಕಾಗೃತೆ ಬರುತ್ತದೆ. ನಾಮ ಸ್ಮರಣೆ ಅದಕ್ಕೆ ನೆರವಾಗುತ್ತದೆ ಎಂದರು.

ಈ ವೇಳೆ ಸೀಮಾ ಅಧ್ಯಕ್ಷ ಮತ್ತಿಗಾರ ಉಮಾಪತಿ ಭಟ್ಟ, ಪ್ರಮುಖರಾದ ವಿ.ಆರ್.ಹೆಗಡೆ ಕೊಡಗಿಬಾಲ್, ಎಂ.ಆರ್.ಹೆಗಡೆ ಮತ್ತಿಹಳ್ಳಿ, ವಿ.ಎಂ.ಹೆಗಡೆ ತ್ಯಾಗಲಿ ಇತರರು ಇದ್ದರು.

Share This
300x250 AD
300x250 AD
300x250 AD
Back to top