ನವದೆಹಲಿ: ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಇತಿಹಾಸ ತಿರುಚಲು ಮುಂದಾಗುವ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗವನ್ನು ಕಡೆಗಣಿಸುವವರ ವಿರುದ್ಧ ಸದಾ ಹೋರಾಡುವುತ್ತೇವೆ ಎಂದು ಕಾಂಗ್ರೆಸ್ ನಾಯಕರು ಸೋಮವಾರ ಸಂಕಲ್ಪ ಮಾಡಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸ್ವಾತಂತ್ರ‍್ಯೋತ್ಸವ ಸಮಾರಂಭದ ವೇಳೆ ಈ ಪ್ರತಿಜ್ಞೆ ಸ್ವೀಕರಿಸಿದರು. ಸೋನಿಯಾ ಗಾಂಧಿ ಅನುಪಸ್ಥಿತಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ಸೋನಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ, ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕೆ.ಸಿ.ವೇಣುಗೋಪಾಲ್, ಜೈರಾಂ ರಮೇಶ್, ಪವನ್‌ಕುಮಾರ್ ಬನ್ಸಾಲ್ ಸೇರಿದಂತೆ ಇತರ ನಾಯಕರು ಇದ್ದರು.
ಧ್ವಜಾರೋಹಣದ ಬಳಿಕ ನಾಯಕರು ಹಾಗೂ ಕಾರ್ಯಕರ್ತರು ‘ಆಜಾದಿ ಗೌರವ ಯಾತ್ರೆ’ ಅಂಗವಾಗಿ ಎಐಸಿಸಿ ಕೇಂದ್ರ ಕಚೇರಿಯಿಂದ ಗಾಂಧಿ ಸ್ಮೃತಿವರೆಗೂ ಪಾದಯಾತ್ರೆ ನಡೆಸಿದರು. ನಮ್ಮ ಸಂವಿಧಾನ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ಅಗತ್ಯವಿದೆ ಎಂದು ಪ್ರಿಯಾಂಕ ಗಾಂಧಿ ಹೇಳಿದರು.
ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಆದಾಯ ದ್ವಿಗುಣಗೊಳಿಸುವ, ಉದ್ಯೋಗ ಸೃಷ್ಟಿಸುವ ಭರವಸೆಗಳನ್ನು ನೀಡಿದ್ದ ಮೋದಿ ಅವರು ಸ್ವಾತಂತ್ರ‍್ಯೋತ್ಸವದ ಭಾಷಣದ ವೇಳೆ ಈ ಬಗ್ಗೆ ಚಕಾರವನ್ನೇ ಎತ್ತಿಲ್ಲ ಎಂದು ದೂರಿದರು.