ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರುಗಳ ಬದಲಾವಣೆ ಮಾಡುವ ವಿಚಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಉಸ್ತುವಾರಿ ಸಚಿವರ ಬದಲಾವಣೆ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿರುವ ಬಗ್ಗೆ ಸೋಮವಾರ ಧ್ವಜಾರೋಹಣದ ನಂತರ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ಸಿಎಂ ನಮಗೆ ಕೊಟ್ಟ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದೆ ಬದಲಾವಣೆ ಮಾಡುತ್ತಾರೋ ಇಲ್ಲವೋ ನನಗೆ ತಿಳಿಯದ ವಿಚಾರ. ಈ ಬಗ್ಗೆ ಸಿಎಂ ಅವರೇ ನಿರ್ಧರಿಸಲಿದ್ದಾರೆ ಎಂದು ಸಚಿವರು ಹೇಳಿದರು.
ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನಕ್ಕೆ ಪರೇಶ್ ಮೆಸ್ತಾ ಸಾವಿನ ಪ್ರಕರಣದ ಆರೋಪಿ ಅಜಾದ್ ಅಣ್ಣಿಗೇರಿ ನೇಮಕ ಕುರಿತು ಮಾತನಾಡಿದ ಕೋಟಾ ಶ್ರೀನಿವಾಸ ಪೂಜಾರಿ, ಈ ನೇಮಕ ಮಾಡಿರುವ ಬಗ್ಗೆ ತಮಗೆ ಮಾಹಿತಿ ಬಂದಿರಲಿಲ್ಲ. ಘಟನೆ ಬೆಳಕಿಗೆ ಬಂದ ನಂತರ ಮಾಹಿತಿಯನ್ನ ಪಡೆದಿದ್ದು ವಕ್ಫ್ ಬೋರ್ಡ್ ಬಿಜೆಪಿಯ ಹಿಡಿತದಲ್ಲಿ ಇರದ ಸಂಸ್ಥೆಯಾಗಿದೆ. ಎರಡು ಪಕ್ಷದವರು ಬೋರ್ಡಿನಲ್ಲಿದ್ದು, ಎರಡು ಪಕ್ಷದವರು ಸೇರಿ ನೇಮಕ ಮಾಡುವ ವೇಳೆ ಈ ತಪ್ಪಾಗಿದೆ ಎಂದು ತಿಳಿದು ಬಂದಿದೆ. ಪರೇಶ್ ಮೆಸ್ತಾ ಸಾವಿನ ಪ್ರಕರಣ ಆರೋಪಿಯನ್ನ ನೇಮಕ ಮಾಡುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ವಿರೋಧಗಳು ಬಂದ ನಂತರ ತಕ್ಷಣ ಸರ್ಕಾರ ನೇಮಕ ಆದೇಶಕ್ಕೆ ತಡೆಯನ್ನ ನೀಡಿದೆ. ಪ್ರಕರಣ ಸಂಬಂಧ ನಡೆದ ಗೊಂದಲಗಳಿಗೆ ಆದೇಶಕ್ಕೆ ತಡೆ ನೀಡುವ ಮೂಲಕ ತೆರೆ ಎಳೆಯಲಾಗಿದೆ ಎಂದರು.
ವೀರಸಾವರ್ಕರ್ ಬಗ್ಗೆ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಠೀಕಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಟಾ ಶ್ರೀನಿವಾಸ ಪೂಜಾರಿ ಸಿದ್ದರಾಮಯ್ಯನವರು ದೊಡ್ಡ ಮಟ್ಟದ ರಾಜಕಾರಣಿಯಾಗಿದ್ದಾರೆ. ಹೀಗೆಲ್ಲ ಸಣ್ಣ ಸಣ್ಣ ಮಾತುಗಳನ್ನಾಡಬಾರದು ಎಂದು ಅವರ ಬಳಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದರು. ಇನ್ನು ಸರ್ಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮೆಂಟ್ ಮಾಡುತ್ತಿದ್ದೇವೆ ಎಂದು ಸಚಿವ ಮಾದುಸ್ವಾಮಿಯವರ ಆಡೀಯೋ ವೈರಲ್ ಆಗಿರುವ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.