ಮುಂಡಗೋಡ: ಕಳೆದ ತಿಂಗಳು ಗೋಡಾನ್‌ನಲ್ಲಿಟ್ಟಿದ್ದ ಸುಮಾರು 3.40 ಲಕ್ಷ ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿಕೊಂಡ ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನಿಂದ 2.50 ಲಕ್ಷ ರೂ. ಮೌಲ್ಯದ 4 ಕ್ವಿಂಟಲ್ 60 ಕೆಜಿ ಅಡಿಕೆ, ಕಳ್ಳತನಕ್ಕೆ ಬಳಸಿದ್ದ 2 ಲಕ್ಷ ರೂ. ಮೌಲ್ಯದ ಅಶೋಕ ಲೈಲ್ಯಾಂಡ್ ಮಿನಿ ಟ್ರಕ್ ಹಾಗೂ ಸುಮಾರು 7 ಲಕ್ಷ ರೂ. ಬೆಲೆಯ ಟಾಟಾ ಇಂಟ್ರಾ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಇಂದಿರಾನಗರ(ಕೊಪ್ಪ)ದ ಫಕ್ಕಿರೇಶ ದೊಡ್ಡಮನಿ ಬಂಧಿತರು. ಜೂ.30ರಂದು ಹಳೂರ ಓಣಿಯ ಹರಿಚಂದ್ರ ಕಾಮತ್ ತಮ್ಮ ಕಲಘಟಗಿ ರಸ್ತೆಯಲ್ಲಿರುವ ಅಡಿಕೆ ಸಂಗ್ರಹಿಸಿಡುವ ಗೋಡಾನ್ ಕೀಲಿ ಮುರಿದು ಸುಮಾರು 2 ಲಕ್ಷ ರೂ. ಬೆಲೆಯ 5 ಕ್ವಿಂಟಲ್ ಅಡಿಕೆಯನ್ನು ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮರುದಿನ ಜುಲೈ 1ರಂದು ಬಸವನ ಬೀದಿಯ ನವೀನ ಹುದ್ಲಮನಿ ತಮ್ಮ ಕಲಘಟಗಿ ರಸ್ತೆಯಲ್ಲಿರುವ ಅಡಿಕೆ ತೋಟದಲ್ಲಿ ಅಡಿಕೆ ಸಂಗ್ರಹಿಸಿಡುವ ಗೋಡಾನ್ ಕೀಲಿ ಮುರಿದು ಯಾರೋ 1.40 ಲಕ್ಷ ರೂ. ಬೆಲೆಯ 3 ಕ್ವಿಂಟಲ್ ಅಡಿಕೆಯನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ದಾಖಲಸಿಕೊಂಡಿರುವ ಪೊಲೀಸರು ಅಡಿಕೆ ಕಳ್ಳನ ಜಾಡು ಹಿಡಿದು ತಮ್ಮ ಖೆಡ್ಡಾಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.