ದಾಂಡೇಲಿ: ಧ್ಯೇಯಕ್ಕಾಗಿ ಬದುಕುವ ಬದುಕು ಮಹಾ ಬದುಕಾಗುತ್ತದೆ. ಅಂತಹ ಬದುಕು, ಅಂಥವರ ಬದುಕಿನ ಸನ್ಮಾರ್ಗಗಳು ಚಿರಸ್ಥಾಯಿವಾಗುವುದರ ಜೊತೆಯಲ್ಲಿ ಅಂಥವರ ಬದುಕಿನ ವೈಶಿಷ್ಟತೆಗಳು ನಮ್ಮೆಲ್ಲರ ಬದುಕಿಗೆ ಪಾಠವಾಗುತ್ತದೆ. ಈ ಬದುಕನ್ನು ಸಾರ್ಥಕತೆಗೊಳಿಸುವ ನಿಟ್ಟಿನಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಬೇಕೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಹೇಳಿದರು.
ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕಾಲೇಜಿನ ಕನ್ನಡ ಸಂಘ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ಹದಿಹರೆಯಕ್ಕೆ ಸಾಹಿತ್ಯ ಸುಧೆ ಹಾಗೂ ವಿದ್ಯಾರ್ಥಿಗಳ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಆರ್.ಜಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು.ಶಿವಮೊಗ್ಗದ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಆರ್. ಹೆಗಡೆ, ಝಾನ್ಸಿರಾಣಿ ಲಕ್ಷ್ಮೀಬಾಯಿಯವರ ಬಗ್ಗೆ ಉಪನ್ಯಾಸ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ, ಬೆಳೆಯುತ್ತಿರುವ ತಂತ್ರಜ್ಞಾನಕ್ಕೆ ಮಾರು ಹೋಗಿ ನಮ್ಮಮಾತೃಭಾಷೆ ಹಾಗೂ ಕನ್ನಡ ಸಾಹಿತ್ಯವನ್ನು ಮರೆಯುವಂತಾಗಬಾರದು. ನಮ್ಮ ತಾಯಿ ಭಾಷೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು. ವಿದ್ಯಾರ್ಥಿಗಳಿಂದ ಕವಿಗೋಷ್ಠಿ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಸ್. ಎಸ್. ದೊಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಾಧ್ಯಾಪಕ ವಿನಯ್ ಎಸ್. ವಂದಿಸಿದರು.ಡಾ. ತೃಪ್ತಿ ನಾಯಕ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಜಿನದತ್ತ ಹಡಗಲಿ, ದತ್ತಗುರು ಹೆಗಡೆ, ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕ ಕೆ.ಜಿ. ಗಿರಿರಾಜ ಇದ್ದರು.