ಶಿರಸಿ: ತಾಲೂಕಿನ ಅತೀ ಹೆಚ್ಚು ಸದಸ್ಯರ ಬಲವನ್ನು ಹೊಂದಿರುವ ಬದನಗೋಡ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಗೀತಾ ಆಲೂರ್ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು 14 ಸದಸ್ಯರ ಸಹಿ ಇರುವ ಮನವಿಯನ್ನು ಸದಸ್ಯರುಗಳಾದ ಮಾರುತಿ ಪಿ.ಮಟ್ಟೆರ್ ಹಾಗೂ ಲೋಕೇಶ ಎಫ್.ನೆರಲ್ಗಿ ಉಪವಿಭಾಗದಾಧಿಕಾರಿಗಳಿಗೆ ಶುಕ್ರವಾರ ಸಲ್ಲಿಸಿದರು.
ಅದ್ಯಕ್ಷೆ ಗೀತಾ ಆಲೂರವರು ಅದ್ಯಕ್ಷರಾದ ಮೇಲೆ ಪ್ರತಿ ತಿಂಗಳು ಮಾಡಬೇಕಾಗಿದ್ದ ಸಾಮಾನ್ಯ ಸಭೆಯನ್ನು ಮಾಡದೇ ಕೇವಲ ಏಳು ತಿಂಗಳು ಮಾತ್ರ ಸಾಮಾನ್ಯ ಸಭೆಯನ್ನು ಮಾಡಿದ್ದಾರೆ. ಇದರಿಂದ ನಮಗೆ ನಮ್ಮ ಕ್ಷೇತ್ರದ ಸಮಸ್ಯೆ ಹಾಗೂ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಅವಕಾಶವಿಲ್ಲದೆ ಪರಿಹಾರ ಕಂಡುಕೊಳ್ಳಲು ತೊಂದರೆ ಉಂಟಾಗಿದೆ. ಕಳೆದ 16 ತಿಂಗಳಲ್ಲಿ ಅದ್ಯಕ್ಷರಿಂದ ಒಂದು ವಾರ್ಡ್ ಸಭೆ ಹಾಗೂ ಒಂದು ಗ್ರಾಮ ಸಭೆ ಮಾತ್ರ ನಡೆದಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರು ಲಭ್ಯರಾಗುತ್ತಿಲ್ಲ. ಅವರು ಅಧ್ಯಕ್ಷರಾಗಿ ಜನರಿಗೆ ಬೀದಿದೀಪ, ಚರಂಡಿ, ನೀರು, ರಸ್ತೆ ಮುಂತಾದ ಮೂಲಭೂತ ಸೌಕರ್ಯ ಒದಗಿಸಲು ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅವಿಶ್ವಾಸ ನಿರ್ಣಯಕ್ಕಾಗಿ ಸದಸ್ಯರುಗಳಾದ ಅಕ್ಕಮಹಾದೇವಿ ಆಲೂರ್, ಶಶಿಕಲಾ ಸಾಕಣ್ಣನವರ್, ವಿದ್ಯಾ ವಾಲ್ಮೀಕಿ, ಸೌಭಾಗ್ಯ ಬನವಾಸಿ, ಚರಂತಿಮಠ ಲಕ್ಷ್ಮೀ, ಆಸ್ಮಾ ಸಾಕೆಣ್ಣನವರ್, ಮಡಿವಾಳ ಮಾದೇವಕ್ಕ, ಕುಮಾರ ಸಣ್ಣೀರಪ್ಪ, ಮಾರುತಿ ಭೋವಿ, ನಾಗರಾಜ ಯಲ್ಲಕ್ಕಿ, ಭದ್ರಗೌಡಾ ಕರೆಡರ್, ಲೋಕೇಶ ನೇರಲ್ಗಿ, ನಟರಾಜ ಬಿ.ಹೊಸೂರ್ ಸಹಿ ಹಾಕಿದ್ದಾರೆ.