ಕಾರವಾರ: ಅನುದಾನ ನೀಡುವಲ್ಲಿ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ತಾಲೂಕಿ ಶಿರವಾಡ ಗ್ರಾಮ ಪಂಚಾಯತ ಅಧ್ಯಕ್ಷ ದಿಲೀಪ್ ನಾಯ್ಕ ಶುಕ್ರವಾರ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದು, ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಶಿರವಾಡ ಗ್ರಾಪಂಗೆ ಕಳೆದ 17 ತಿಂಗಳು ಅಧ್ಯಕ್ಷರಾಗಿದ್ದ ದಿಲೀಪ್, ಈ ಗ್ರಾ.ಪಂ ವ್ಯಾಪ್ತಿಯಲ್ಲಿ ಸರಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಅನುದಾನ ಬರುತ್ತಿಲ್ಲ ಎಂದು ಬೇಸರದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಶಿರವಾಡ ಗ್ರಾಮ ಪಂಚಾಯತಿಯ 14 ಸದಸ್ಯರುಗಳ ಪೈಕಿ 8 ಸದಸ್ಯರು ಮಾಜಿ ಶಾಸಕ ಸೈಲ್ ಬೆಂಬಲಿತರಾಗಿದ್ದಾರೆ. ಹೀಗಾಗಿ ಈ ಗ್ರಾ.ಪಂ.ಗೆ ಅನುದಾನ ನೀಡುವಲ್ಲಿ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ತಡೆಹಿಡಿಯಲಾಗಿದೆ ಎಂದು ದಿಲೀಪ್ ಆರೋಪಿಸಿದ್ದಾರೆ.
ದಿಲೀಪ್ ನಾಯ್ಕ ದೇವತಿವಾಡಾದಿಂದ ಗ್ರಾ.ಪಂ.ಗೆ ಆಯ್ಕೆ ಆಗಿದ್ದು, ಅವರ ಪತ್ನಿ ಅಶ್ವಿನಿ ನಾಯ್ಕ ಕೂಡ ಇದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಂಕರವಾಡಾದಿಂದ ಆಯ್ಕೆಯಾಗಿದ್ದರು.