ಶಿರಸಿ: ರಾಜ್ಯದ ಅರಣ್ಯ ನಿರ್ವಹಣೆ ಅಭಿವೃದ್ಧಿ ಬಗ್ಗೆ ಇತ್ತೀಚಿಗೆ ವೃಕ್ಷಲಕ್ಷ ಆಂದೋಲನದ ತಂಡ ಅರಣ್ಯ ಸಚಿವ ಉಮೇಶ ಕತ್ತಿ ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಪಿಸಿಸಿಎಫ್ ಆರ್, ಕೆ.ಸಿಂಗ್ ಪರಿಸರ ಇಲಾಖೆ ಕಾರ್ಯದರ್ಶಿ ವಿಜಯ ಮೋಹನ ರಾಜ್ ಇನ್ನಿತರ ಉನ್ನತ ಅರಣ್ಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ತಜ್ಞ ಶಿಫಾರಸ್ಸು ಮನವಿ ನೀಡಿತು.
ಈ ವರ್ಷದ ಬಜೆಟ್‌ನಲ್ಲಿ ಪರಿಸರ ಬಜೆಟ್ ಹೆಸರಲ್ಲಿ 100 ಕೋಟಿ ರೂ. ಮೀಸಲಿಟ್ಟಿದ್ದೇವೆ. ಈ ಯೋಜನೆ ಅಡಿ ಕರಾವಳಿ ಹಸಿರು ಕವಚ, ಮಿರಿಸ್ವಿತಾ ಸ್ಟಾಂಪ್,ಕಾನು ಅಭಿವೃದ್ಧಿ, ಶೋಲಾ ಕಾಡು ರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲಿದ್ದೇವೆ ಎಂಧು ಅರಣ್ಯ ಸಚಿವರು & ಅರಣ್ಯ ಇಲಾಖೆ ಅಧಿಕಾರಿಗಳು ವೃಕ್ಷ ಲಕ್ಷ ನಿಯೋಗಕ್ಕೆ ಮಾಹಿತಿ ನೀಡಿದರು. ವನ್ಯ ಜೀವಿ ಪ್ರದೇಶ ಘೋಷಣೆ ಕ್ಯಾಬಿನೆಟ್ ಮುಂದೆ ಬರಲಿದೆ ಎಂದು ತಿಳಿಸಿದರು. ಬೆಟ್ಟ ಅಭಿವೃದ್ಧಿ ಯೋಜನೆಯನ್ನು ರೈತರ ಜೊತೆ ಜಾರಿ ಮಾಡುತ್ತೇವೆ ಎಂದು ಎ.ಸಿ.ಎಸ್. ಜಾವೇದ ಅಖ್ತರ ತಿಳಿಸಿದರು.
ಶಿಫಾರಸ್ಸಿನ ವಿವರ:
- ಅರಣ್ಯದ ಗಡಿ ಗುರುತಿಸುವುದು ಮತ್ತು ಪಹಣಿಪತ್ರ : ಮಲೆನಾಡು ಹಾಗೂ ಕರಾವಳಿ ಪ್ರದೇಶ ಬಹಳೆಡೆಯಲ್ಲಿ ಸ್ಥಳಮಟ್ಟದಲ್ಲಿ ಅರಣ್ಯ ಪ್ರದೇಶ ಗಡಿ ಗುರುತಿಸಿ ಪ್ರತಿ ಸರ್ವೇ ನಂಬರಿನ ಅರಣ್ಯದ ಪಹಣಿ ಪತ್ರ ರಚಿಸುವ ಜರೂರತ್ತಿದೆ. ಇದರಲ್ಲಿನ ಗೊಂದಲಗಳು ಬಹಳೆಡೆ ಅರಣ್ಯ ನಾಶಕ್ಕೆ ಕಾರಣವಾಗುತ್ತಿದೆ. ಆದ್ದರಿಂಧ ಶೀಘ್ರ ಕಾರ್ಯಕ್ರಮ ರೂಪಿಸಬೇಕು.
- ಬದಲೀ ಅರಣ್ಯ ಯೋಜನೆ: ನಿಧಿಯಲ್ಲಿ ಪ್ರತಿವರ್ಷವೂ ಕೈಗೊಳ್ಳುವ ಅರಣ್ಯೀಕರಣದ ವ್ಯಾಪ್ತಿಯಲ್ಲಿ ಅದರ ನಿಖರವಾದ ಸ್ಥಳ ಅದರಲ್ಲಿ ನೆಡುವ ಗಿಡಮರಗಳ ಪ್ರಭೇಧಗಳ ವೈವಿಧ್ಯ ಇತ್ಯಾದಿಗಳೆಲ್ಲವೂ ಹಲವು ಗೊಂದಲಗಳಿಂದ ಕೂಡಿದ್ದು, ಕಾಂಪಾದ ನಿಜವಾದ ಉದ್ದೇಶ ಈಡೇರುತ್ತಿಲ್ಲ. ಆದ್ದರಿಂದ ಈ ಕುರಿತು ಪ್ರತಿವರ್ಷವೂ ಸಮಗ್ರವಾದ ಕ್ರಿಯಾಯೋಜನೆಗಳನ್ನು ರೂಪಿಸಬೇಕಿದೆ. ಅರೆ ಮಲೆನಾಡು ಹಾಗೂ ಬಯಲುನಾಡಿನ ಖಾಲಿ ಅರಣ್ಯ ಭೂಮಿಗಳನ್ನು ವನೀಕರಣ ಮಾಡಲು ಈ ಯೋಜನೆಯನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು.
- “ಬಾಂಬೂ-ಮಿಶನ್” ಯೋಜನೆ : ರೈತರು ಹಾಗೂ ಗ್ರಾಮ ಅರಣ್ಯ ಸಮಿತಿಗಳ ಸಹಭಾಗಿತ್ವ ಕೃಷಿ ಅರಣ್ಯ ಯೋಜೆನಗಳ ಮೂಲಕ ರಾಜ್ಯದಲ್ಲಿ ವ್ಯಾಪಕವಾಗಿ ಬಿದಿರನ್ನು ಬೆಳೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ “ಬಾಂಬೂ-ಮಿಶನ್” ಯೋಜನೆಯನ್ನು ಸೂಕ್ತವಾಗಿ ಮಾರ್ಪಾಟು ಮಾಡಬೇಕಿದೆ.
- ಮಲೆನಾಡಿನ ಭೂಕುಸಿತ ಸಾಧ್ಯತೆಗಳಿರುವ ಪ್ರದೇಶಗಳಲ್ಲಿ ಮರಕಡಿತ ನಿಯಂತ್ರಣ : ಅತಿಯಾದ ಮಳೆ ಬೀಳುವ ಮಲೆನಾಡಿನ ಕಡಿದಾದ ಘಟ್ಟದಂಚಿನ ಪ್ರದೇಶಗಳ ಪರ್ವತ ಸಾಲುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರಿ ಭೂ ಕುಸಿತಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಈ ಬಗೆಯ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಮರಕಡಿತವನ್ನು (ಒಣಮರ ತೆಗೆಯುವದು ಅಥವಾ ಪ್ಲಾಂಟೇಶನ್ ಕಟಾವು ಮಾಡುವುದು) ನಿರ್ಬಂಧಿಸುವ ನಿರ್ಧಾರವನ್ನು ಶೀಘ್ರವಾಗಿ ಕೈಗೊಳ್ಳಬೇಕಿದೆ. ಈ ಕುರಿತಂತೆ “ವರ್ಕಿಂಗ-ಪ್ಲಾನ್”ನಲ್ಲೂ ಸೂಕ್ತವಾದ ತಿದ್ದುಪಡಿ ತರಬೇಕಿದೆ.
- ನರ್ಸರಿ ಸಬಲೀಕರಣ : ಪ್ರತಿ ಅರಣ್ಯ ವಲಯದಲ್ಲಿನ ಕನಿಷ್ಟ ಒಂದು ನರ್ಸರಿಯಾದರೂ ಸುವ್ಯಸ್ಥಿತ ರೀತಿಯಲ್ಲಿ ಇರುವಂತೆ ನೋಡಿಕೊಂಡು, ಅಲ್ಲಿ ಸ್ಥಳಿಯ ಅರಣ್ಯ ಪ್ರಭೇಧಗಳು ಹಣ್ಣು ಹಂಪಲ ಪ್ರಬೇಧಗಳು ಸ್ಥಳೀಯ ಔಷಧಿ ಮೂಲಿಕೆ ಹಾಗೂ ಚೌಬಿನೇ ಪ್ರಬೇಧಗಳಿಗೆ ಆದ್ಯತೆ ನೀಡಬೇಕು.
- ವನ್ಯಜೀವಿ ಪ್ರದೇಶಗಳ ಘೋಷಣೆ ಮತ್ತು ಸಂರಕ್ಷಣೆ : ರಾಜ್ಯಾದ್ಯಂತ ಹಲವಾರು ಪ್ರದೇಶಗಳಲ್ಲಿ ಹೊಸ ವನ್ಯಜೀವಿ ಪ್ರದೇಶಗಳನ್ನು ಗುರುತಿಸಿ ಸಂರಕ್ಷಿಸುವ ಕುರಿತಂತೆ ಈಗಾಗಲೇ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಹಲವು ನಿರ್ಧಾರಗಳಾಗಿವೆ. ಆದರೆ ಅವುಗಳ ಅಧಿಕೃತ ಘೋಷಣೆ ಇನ್ನೂ ಬಾಕಿಯಿದೆ. ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು.
(ಉದಾಹರಣೆಗೆ : ದಾವಣಗೆರೆ ಬಳಿಯ ಕೊಂಡಜ್ಜಿಕೆರೆ, ಉತ್ತರ ಕ್ನನಡ ಶಿರಸಿ ತಾಲ್ಲೂಕಿನ ಮುಂಡಿಗೆ ಜಡ್ಡಿ ಪಕ್ಷಿಧಾಮ,ಹಿರಿಯೂರಿನ ಮಾರಿಕಣಿವೆ) - ಜನಸಹಭಾಗಿತ್ವದ ಬೆಟ್ಟ ಅಭಿವೃದ್ಧಿಯೋಜನೆಗಳು : ಉತ್ತರ ಕ್ನನಡ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಬೆಟ್ಟ ಪ್ರದೇಶಗಳನ್ನು (ಸಮೂದಾಯ ಅರಣ್ಯ ಪ್ರದೇಶಗಳು) ಸ್ಥಳೀಯ ರೈತರು ಸಹಭಾಗಿತ್ವದಲ್ಲಿ ಸಂರಕ್ಷಿಸಲು ವಿಪುಲ ಅವಕಾಶಗಳಿವೆ. ಈ ಕುರಿತ ಮಾದರಿ ಯೋಜನಾ ಪ್ರಸ್ತಾವಗಳನ್ನೂ ಈಗಾಗಲೇ ಅರಣ್ಯ ಇಲಾಖೆಗೆ ಸಲ್ಲಿಸಲಾಗಿದೆ. ವ್ಯಾಪಕ ಅರಣ್ಯೀಕರಣಕ್ಕೆ ಅವಕಾಶ ತೆರೆದಿಡುವ ಈ ಬಗೆಯ ಯೋಜನೆಗಳನ್ನು ಉತ್ತರ ಕನ್ನಡದ ಪ್ರತಿ ತಾಲ್ಲೂಕಿನಲ್ಲಿ ಚಾಲನೆ ನೀಡಬೇಕು.
ಅನಂತ ಹೆಗಡೆ ಅಶೀಸರ, ಡಾ.ವಾಮನ ಆಚಾರ್ಯ,ರಾಮಕೃಷ್ಣ ಪ್ರೋ.ಬಿ.ಎಮ್.ಕುಮಾರಸ್ವಾಮಿ, ಡಾ|| ಟಿ.ವಿ. ರಾಮಚಂದ್ರ, ಡಾ|| ಪ್ರಕಾಶ ಮೇಸ್ತ ,ಡಾ|| ಕೇಶವ ಎಚ್. ಕೊರ್ಸೆ, ಡಾ|| ಬಾಲಚಂದ್ರ ಸಾಯಿಮನೆ ಮುಂತಾದ ತಜ್ಞರ ತಂಡ ಶಿಫಾರಸ್ಸು ಮನವಿ ಸಲ್ಲಿಸಿತು.