ದಾಂಡೇಲಿ : ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಲಿಂಕ್ ರಸ್ತೆಯ ಮನೆಯೊಂದರೊಳಗೆ ಬುಧವಾರ ಮತ್ತೆ ಗಟಾರದ ತ್ಯಾಜ್ಯ ನೀರು ನುಗ್ಗಿ ಸಮಸ್ಯೆಯಾಗಿದ್ದು, ಸ್ಥಳಕ್ಕೆ ನಗರ ಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ನಗರ ಸಭೆಯ ಸದಸ್ಯರುಗಳಾದ ಬುದವಂತಗೌಡ ಪಾಟೀಲ, ಪದ್ಮಜಾ ಪ್ರವೀಣ್ ಜನ್ನು ಮತ್ತು ಪೌರಾಯುಕ್ತ ವಿವೇಕ ಬನ್ನೆ ಸಿಬ್ಬಂದಿಗಳ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಲಿಂಕ್ ರಸ್ತೆಯ ನಿವಾಸಿ ವೆಂಕಟೇಶ ಪಗಡೆ ಎಂಬವರ ಮನೆಗೆ ಮತ್ತು ಪಕ್ಕದಲ್ಲಿರುವ ಸಂತೋಷ ಹೋಟೆಲಿನ ಕೆಳ ಅಂತಸ್ತಿನೊಳಗೆ ಮತ್ತೆ ನೀರು ನುಗ್ಗಿದ್ದು, ಈ ನಿಟ್ಟಿನಲ್ಲಿ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಪೌರಾಯುಕ್ತ ವಿವೇಕ ಬನ್ನೆ ನಗರ ಸಭೆಯ ಸಿಬ್ಬಂದಿಗಳ ಜೊತೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು.
ಇಲ್ಲಿ ಕಳೆದ ಕೆಲವು ದಿನಗಳಿಂದ ಸಮಸ್ಯೆ ನಿವಾರಣೆಗಾಗಿ ನಗರಸಭೆ ಅಗತ್ಯ ಕ್ರಮವನ್ನು ಕೈಗೊಳ್ಳುತ್ತಿದೆ. ರಸ್ತೆಯ ಪಕ್ಕದಲ್ಲಿ ಇನ್ನೊಂದೆಡೆ ಮಳಿಗೆಯೊಂದರ ಕೆಳಭಾಗದಲ್ಲಿ ನೀರು ಸರಾಗವಾಗಿ ಹರಿಯಲಾಗದೆ ಈ ಸಮಸ್ಯೆ ಉದ್ಭವವಾಗಿದೆ ಎಂದು ಅಂದಾಜಿಸಲಾಗಿದೆ. ಇದೀಗ ಹತ್ತಿರದಲ್ಲಿರುವ ನಾಲ್ಕೈದು ಅಂಗಡಿಗಳಿಗೆ ಯಾವುದೇ ಸಂದರ್ಭದಲ್ಲಿ ಹಾನಿಯಾಗುವ ಸಾಧ್ಯತೆಯಿದೆ.
ನಾಲಾದ ಮೇಲ್ಗಡೆಯಿರುವ ಮಳಿಗೆಯನ್ನು ಸದ್ಯಕ್ಕೆ ತೆರವುಗೊಳಿಸಿ, ನಾಲಾದಲ್ಲಿ ತ್ಯಾಜ್ಯ ನೀರು ಹಾಗೂ ಮಳೆ ನೀರು ಸರಾಗವಾಗಿ ಹರಿಯದಂತೆ ಬ್ಲಾಕ್ ಆಗಿರುವುದನ್ನು ಸರಿಪಡಿಸಿ, ನಾಲಾದ ಮೇಲ್ಗಡೆ ಸಿಮೆಂಟ್ ಕಾಂಕ್ರೀಟ್ ಮಾಡಿದ ನಂತರ ಮಳಿಗೆಯನ್ನು ಸಿದ್ಧಪಡಿಸುವುದು ಉತ್ತಮ ಎಂಬ ಅಭಿಪ್ರಾಯ ಸ್ಥಳದಲ್ಲಿ ವ್ಯಕ್ತವಾಗಿದೆ. ಇಲ್ಲವಾದಲ್ಲಿ ಈ ಸಮಸ್ಯೆ ಮಳೆಗಾಲದ ಸಂದರ್ಭದಲ್ಲಿ ಪ್ರತಿ ವರ್ಷ ಉದ್ಭವವಾಗಲಿದೆ. ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ನಗರಸಭೆ ಅಗತ್ಯ ಕ್ರಮವನ್ನು ಕೈಗೊಂಡಿದೆ. ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿ ಶುಭಂ ರಾಯ್ಕರ್, ಆರೋಗ್ಯ ನಿರೀಕ್ಷಕ ವಿಲಾಸ್ ಮೊದಲಾದವರು ಉಪಸ್ಥಿತರಿದ್ದರು.