ದಾಂಡೇಲಿ : ಗೋವಾ ಪ್ರವಾಸಕ್ಕೆ ತೆರಳುತ್ತಿದ್ದ ವ್ಯಕ್ತಿಗೆ ತಾಲೂಕಿನ ಬರ್ಚಿ ಹತ್ತಿರ ಹೃದಯಾಘಾತವಾಗಿ, ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
ಬೆಂಗಳೂರು ಮೂಲದ ಚನ್ನಕೇಶವಯ್ಯ (ವ.೫೬) ಎಂಬವರೇ ಹೃದಯಘಾತಕ್ಕೊಳಗಾಗಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಡುಗೆ ಗುತ್ತಿಗೆದಾರರಾಗಿರುವ ಇವರು ತನ್ನ ಸಿಬ್ಬಂದಿಗಳ ಜೊತೆ ಟಿಟಿ ವಾಹನದ ಮೂಲಕ ಬೆಂಗಳೂರಿನಿಂದ ಸಿಗಂದೂರು, ಶಿರಸಿ ,ಗೋಕರ್ಣ ಪ್ರವಾಸ ಮುಗಿಸಿ ದಾಂಡೇಲಿ ಮಾರ್ಗವಾಗಿ ಗೋವಾಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಹೃದಯಾಘಾತವಾಗಿದೆ. ತಕ್ಷಣವೇ ಇವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆ ತರಲಾಗಿದೆ. ಚಿಕಿತ್ಸೆಗೆ ದಾಖಲಿಸಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.