ದಾಂಡೇಲಿ : ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ದಾಂಡೇಲಿ ಪ್ರೆಸ್ ಕ್ಲಬ್ ಇವರ ಆಶ್ರಯದಡಿ ಜುಲೈ 5 ರಂದು ಸಂಜೆ 5.30 ಗಂಟೆಗೆ ಬಂಗೂರನಗರದ ಡಿಲಕ್ಸ್ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದಾಂಡೇಲಿಯ ಕರ‍್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಎಸ್.ಜೈನ್ ತಿಳಿಸಿದ್ದಾರೆ.
ಅವರು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದರು. ಕಾರ್ಯಕ್ರಮವನ್ನು ಲೇಖಕರು ಹಾಗೂ ನಗರದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ವಿನಯಾ ಒಕ್ಕುಂದ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ಡಿವೈಎಸ್ಪಿ ಶಿವಾನಂದ ಮದರಕಂಡಿ, ಎಸಿಎಫ್ ಎಂ.ಎಸ್.ಕಳ್ಳಿಮಠ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಜೆ.ಆರ್, ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸದಸ್ಯರಾದ ಅನಿಲ್ ಪಾಟ್ನೇಕರ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಭಕ್ಕಳ, ರಾಜ್ಯ ಕಾ.ಪ.ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ.ಎನ್.ವಾಸರೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಯು.ಎಸ್.ಪಾಟೀಲ್ ಅವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಎಸ್.ಜೈನ್ ಅವರು ವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ದಾಂಡೇಲಿಯ ಅರಣ್ಯ ಪ್ರವಾಸಿ ಮಂದಿರದಲ್ಲಿ 11 ವರ್ಷಗಳ ಕಾಲ, ಆನಂತರ ಕಳೆದ 15 ವರ್ಷಗಳಿಂದ ಕಾಮತ್ ರಿಫ್ರೆಶ್ಮೆಂಟ್’ನಲ್ಲಿ ಸಹಾಯಕಿಯಾಗಿ ಅನುಪಮ ಸೇವೆಯನ್ನು ಸಲ್ಲಿಸಿರುವುದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಕೋವಿಡ್ ಕೇಂದ್ರದಲ್ಲಿ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತರಿಗೆ ಊಟ- ಉಪಹಾರವನ್ನು ಕಾಮತ್ ರಿಫ್ರೆಶ್ಮೆಂಟಿನಿಂದ ನಿರಂತರವಾಗಿ ವಿತರಿಸುವ ಜವಾಬ್ದಾರಿಯನ್ನು ಹೊತ್ತು, ತಮ್ಮ ಪ್ರಾಣದ ಹಂಗು ತೊರೆದು ನಿಷ್ಟೆಯಿಂದ ಕಾರ್ಯನಿರ್ವಹಿಸಿರುವ ನಗರದ ಬೈಲುಪಾರ್ ನಿವಾಸಿ ಸಾರಾ ಕ್ರೀಸ್ಟನಮ್ಮ ಹಾಗೂ ಕಳೆದ ಹತ್ತು ವರ್ಷಗಳ ಹಿಂದೆ ಟ್ರಕ್ ಅಪಘಾತದಲ್ಲಿ ಒಂದು ಕಾಲನ್ನು ಸಂಪೂರ್ಣವಾಗಿ ಕಳೆದುಕೊಂಡು ವಿಶೇಷ ಚೇತನರಾಗಿದ್ದರೂ, ಪ್ರವಾಸಿ ಪ್ರತಿನಿಧಿಯಾಗಿ ಯಶಸ್ವಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿರುವ ಗಾಂಧಿನಗರದ ನಿವಾಸಿ ಅಜಯ ಕುಮಾರ್ ಓಬಳೇಶ ಹರಿಜನ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂದೇಶ್ ಎಸ್.ಜೈನ್, ಉಪಾಧ್ಯಕ್ಷರಾದ ಕೃಷ್ಣ ಪಾಟೀಲ್, ಪ್ರಧಾನ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಖಜಾಂಚಿ ಅಕ್ಷಯಗಿರಿ ಗೋಸಾವಿ, ಜಿಲ್ಲಾ ಸಮಿತಿ ಸದಸ್ಯ ಯು.ಎಸ್. ಪಾಟೀಲ್, ಸದಸ್ಯರಾದ ಬಿ.ಎನ್.ವಾಸರೆ, ಪ್ರವೀಣ್ ಕುಮಾರ್ ಸುಲಾಖೆ, ರಾಜೇಶ ತಳೇಕರ, ಅಪ್ತಾಬ್ ಶೇಖ ವಿನಂತಿಸಿದ್ದಾರೆ.