ಕುಮಟಾ: ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿನ ಎಲ್ಲಾ ವಸತಿ ಶಾಲೆಗಳಲ್ಲಿ ಯಾವುದೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳಿಗೆ ಮೀಸಲಾತಿಗಳನ್ವಯ (ಪರೀಕ್ಷೆಯಿಂದ ವಿನಾಯತಿ ಹೊಂದಿರುವ ವರ್ಗಗಳನ್ನು ಹೊರೆತುಪಡಿಸಿ) ಆಯ್ಕೆ ಮಾಡಲು ಆಯಾ ಜಿಲ್ಲೆಗಳ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರು (ಉಪವಿಭಾಗಾಧಿಕಾರಿಗಳು) ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಕುಮಟಾ ಉಪವಿಭಾಗ ಮಟ್ಟದ ಐದು ಶಾಲೆಗಳು ಸೇರಿದಂತೆ 6 ನೇ ತರಗತಿಯಲ್ಲಿ ಒಟ್ಟು 99 ಖಾಲಿ ಸೀಟುಗಳು ಮತ್ತು 7, 8 ಮತ್ತು 9 ನೇ ತರಗತಿಗಳಲ್ಲಿ ಒಟ್ಟು 144 ಖಾಲಿ ಸೀಟುಗಳನ್ನು ಭರ್ತಿ ಮಾಡಿಕೊಳ್ಳಬೇಕಾಗಿದೆ.
6 ನೇ ತರಗತಿಯ ಖಾಲಿ ಸೀಟುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ, 2025-2026 ನೇ ಶೈಕ್ಷಣಿಕ ಸಾಲಿಗೆ ನಡೆಸಲಾದ ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರವೇಶ ಪರೀಕ್ಷೆ ಬರೆದು ಈಗಾಗಲೇ ಪ್ರಕಟಿಸಿದ ಅಂಕ ಮತ್ತು ರ‍್ಯಾಂಕ್ ಪ್ರಕಾರ 4 ಸುತ್ತಿನ ಪ್ರವೇಶದ ನಂತರದಲ್ಲಿ 6 ನೇ ತರಗತಿಯಲ್ಲಿ ಖಾಲಿ ಇರುವ ಸೀಟುಗಳನ್ನು ಸ್ಥಳೀಯ/ಸ್ಥಳೀಯೇತರ, ಲಿಂಗವಾರು, ವರ್ಗವಾರು ತಾಲೂಕುವಾರು ಅಭ್ಯರ್ಥಿಗಳು ಗಳಿಸಿರುವ ಅಂಕಗಳಿಗೆ ಅನುಗುಣವಾಗಿ ಆಯಾ ಪ್ರವರ್ಗದ ಪಟ್ಟಿಯಲಿರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಿ ಮೀಸಲಾತಿ ಹಾಗೂ ಮೆರಿಟ್ ಆಧಾರದ ಮೇಲೆ ಕ.ಪ.ಪ್ರಾ ದಿಂದ ನೀಡಿರುವ ಹಂಚಿಕೆಯಾಗದೇ ಉಳಿದಿರುವ ಮೆರಿಟ್ ಲಿಸ್ಟ (Unallotted merit list) ಅನ್ವಯ ಆಯಾ ತಾಲೂಕಿನ ಸ್ಥಳೀಯ ಅಭ್ಯರ್ಥಿಗಳಿಗೆ ಶೇ 75 ಹಾಗೂ ಅದೇ ಜಿಲ್ಲೆಯ ಇತರ ತಾಲೂಕಿನ ಅಭ್ಯರ್ಥಿಗಳಿಗೆ ಶೇ. 25 ರಷ್ಟು ಹಂಚಿಕೆ ಮಾಡಿ ದಾಖಲಾತಿ ಮಾಡಿಕೊಳ್ಳಲಾಗುವುದು.
ಹಂಚಿಕೆಯಾಗದೇ ಉಳಿದಿರುವ ಮೆರಿಟ್ ಲಿಸ್ಟ (Unallotted merit list) ಆಧಾರದಲ್ಲಿ ದಾಖಲಾಗುವ ಕಾರಣ 6 ನೇ ತರಗತಿಯ ಖಾಲಿ ಸೀಟುಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಶ್ಯ ಇರುವುದಿಲ್ಲ. ಸದರಿ ಲಿಸ್ಟ ಪ್ರಕಾರ ಮುಂದಿನ ವಿದ್ಯಾರ್ಥಿಗಳ ವಿಳಾಸ/ದೂರವಾಣಿಗಳಿಗೆ ಸಂಪರ್ಕಿಸಿ ಮೇಲೆ ತಿಳಿಸಿದ ಅಧಿಕೃತ ಜ್ಞಾಪನದ ಷರತ್ತುಗಳಿಗೆ ಒಳಪಟ್ಟು ದಾಖಲಾತಿ ಮಾಡಿಕೊಳ್ಳಲಾಗುವುದು.
7, 8 ಮತ್ತು 9 ನೇ ತರಗತಿಗಳಲ್ಲಿ ಖಾಲಿ ಇರುವ ಸೀಟುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ, ಕುಮಟಾ ಉಪವಿಭಾಗ ಮಟ್ಟದ ಐದು ವಸತಿ ಶಾಲೆಗಳ ಖಾಲಿ ಇರುವ ಸೀಟುಗಳಿಗೆ ಅರ್ಜಿ ಪಡೆದುಕೊಳ್ಳಲು ಹಾಗೂ ಭರ್ತಿ ಮಾಡಿ ದಾಖಲಾತಿಗಳೊಂದಿಗೆ ವಿದ್ಯಾರ್ಥಿಯ ಪೋಷಕರು ತಮ್ಮ ಹತ್ತಿರದ ಯಾವುದೇ ವಸತಿ ಶಾಲೆಯಲ್ಲಿ ಜುಲೈ 7 ಸಂಜೆ 4 ಗಂಟೆಯ ಒಳಗೆ ಸಲ್ಲಿಸುವುದು ನಂತರದಲ್ಲಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಒಟ್ಟು ಸ್ವೀಕೃತ ಅರ್ಜಿಗಳ ಸಂಖ್ಯೆಯ ಮೇಲೆ ಆಯ್ಕೆ ಪ್ರಕ್ರಿಯೆಯನ್ನು ನಿರ್ಧರಿಸಲಾಗುವುದು ಎಂದು ಕುಮಟಾ ಉಪ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸತಿ ಶಾಲೆಗಳಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ
