ಅರಣ್ಯ ಅಧಿಕಾರಿಗಳ ಭೇಟಿ: ಬಿದಿರು ಬೆಳೆಸುವ ಮಾದರಿ ಯೋಜನೆಗೆ ತಯಾರಿ
ಶಿರಸಿ: ಮಲೆನಾಡಿನಲ್ಲಿ ಮೇ. 22 ರಂದು ಆರಂಭವಾದ ಬೆಟ್ಟ ಜಾಗೃತಿ ಅಭಿಯಾನ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದನ್ನು ಮುಂದುವರೆಸಬೇಕು ಎಂಬ ನಿರ್ಧಾರವನ್ನು ವೃಕ್ಷ ಆಂದೋಲನದ ಪ್ರಮುಖರು ಪ್ರಕಟಿಸಿದ್ದಾರೆ.
ಜೂ.1 ರಂದು ಶಿರಸಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|| ಅಜ್ಜಯ್ಯ ಅವರನ್ನು ಬೆಟ್ಟ ಸುಸ್ಥಿರ ಅಭಿವೃದ್ಧಿ ಅಭಿಯಾನದ ನಿಯೋಗ ಭೇಟಿ ಮಾಡಿ ವಿವರ ಸಮಾಲೋಚನೆ ನಡೆಸಿತು. ಬಿದಿರು ಬೆಳೆಸಲು ಅವಕಾಶ ಇದೆ. ಬೆಟ್ಟದಾರರು ಮುಂದೆ ಬರಬೇಕು. ಬೆಟ್ಟ ವನೀಕರಣಕ್ಕೆ ಪೂರ್ಣ ಬೆಂಬಲ ನೀಡಲಾಗುತ್ತದೆ. ಬೆಟ್ಟ ಅರಣ್ಯ ನಾಶ ಮಾಡಿದರೆ ಕಾನೂನು ಕ್ರಮ ಅನಿವಾರ್ಯ. ಬೆಟ್ಟ ನಿಯಮ ಪಾಲಿಸಬೇಕು. ಬೆಟ್ಟ ಅರಣ್ಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲೇ ಬರುತ್ತದೆ ಎಂಬ ಉಚ್ಚ ನ್ಯಾಯಾಲಯದ ಆದೇಶವನ್ನು ಡಿ.ಸಿ. ಎಫ್. ಡಾ|| ಅಜ್ಜಯ್ಯ ಎತ್ತಿ ಹೇಳಿದರು.
ಬೆಟ್ಟ ಅಭಿವೃದ್ಧಿ ಅಭಿಯಾನವನ್ನು ಶಿವಮೊಗ್ಗಾ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ನಡೆಸಲಾಗಿದೆ. ಉತ್ತರಕನ್ನಡ ಜಿಲ್ಲೆಯ ಬೆಟ್ಟ ಪ್ರಯೋಗಗಳ ಬಗ್ಗೆ ಕೊಪ್ಪ, ಶೃಂಗೇರಿ, ತೀರ್ಥಹಳ್ಳಿಗಳ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಟ್ಟ ಜಾಗೃತಿ ಅಭಿಯಾನ ಮುಂದುವರೆಸಲಿದ್ದೇವೆ. ನೆಲಮಾವು ಗ್ರಾಮದ ಬೆಟ್ಟ ಅರಣ್ಯ ರಕ್ಷಣೆ ಬಗ್ಗೆ ಅರಣ್ಯ ಇಲಾಖೆ ಪೂರ್ಣ ಬೆಂಬಲ ನೀಡಬೇಕು ಎಂದು ನಿಯೋಗದ ನೇತೃತ್ವ ವಹಿಸಿದ್ದ ಅನಂತ ಹೆಗಡೆ ಅಶೀಸರ ಮನವಿ ಸಲ್ಲಿಸಿದರು.
ಯಡಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ಅವರು ಬೆಟ್ಟದಲ್ಲಿ ಗಿಡ ನೆಡಲು ತಯಾರಿ ನಡೆದಿದೆ. ಮಾದರಿ ಬಿದಿರು ಯೋಜನೆ ರೂಪಿಸಲು ರೈತರು ಗುಂಪು ರಚಿಸಿದ್ದೇವೆ. ಬೆಟ್ಟ ಅಭಿವೃದ್ಧಿಗೆ ಅರಣ್ಯ ಇಲಾಖೆ ಬೆಂಬಲ ಬೇಕು ಎಂದು ಮನವಿ ಮಾಡಿದರು. ಅಡಿಕೆ ಸಾಂಬಾರು ಬೆಳೆಗಾರ ಸಂಘದ ಅಧ್ಯಕ್ಷ ನಾರಾಯಣ ಗಡಿಕೈ ಅವರು ರೈತ ಸಹಕಾರಿ ಸಂಘಗಳ ಸಹಕಾರ ಪಡೆಯಲು ಸಿದ್ದಾಪುರ ತಾಲೂಕಿನಲ್ಲಿ ಬೆಟ್ಟ ಜಾಗೃತಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ತಿಳಿಸಿದರು. ಬೆಟ್ಟ ಜೀವ ವೈವಿಧ್ಯ ಹೆಚ್ಚಿಸಲು ಪ್ರಯತ್ನ, ಹಲಸು ಮುಂತಾದ ವನ ಮಾಡಿರುವ ಬೆಟ್ಟ ಅಭಿವೃದ್ಧಿ ಸ್ಥಳ ಭೇಟಿ ಮಾಡಬೇಕು ಎಂದು ಜಿಲ್ಲಾ ಸಾವಯವ ರೈತರ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಕೋಟೆಮನೆ ತಿಳಿಸಿದರು. ಪುಟ್ಟನ್ಮನೆ ಬೆಟ್ಟ ಅತಿಕ್ರಮಣ ತೆರವು ಸಾಧ್ಯವಾಗಿಲ್ಲ ಎಂಬ ಸಂಗತಿಯನ್ನು ನಿಯೋಗ ಎತ್ತಿ ಹೇಳಿತು.
ಹೇರೂರು ಗ್ರಾಮದ ಕಸ ರಾಶಿಗಳು ನೆಲಮಾಂವ್ ಬೆಟ್ಟ ನಾಶ ಮಾಡುತ್ತಿವೆ. ಅದನ್ನು ಅರಣ್ಯ ಇಲಾಖೆ ಮತ್ತು ಪಂಚಾಯತ ತಡೆಗಟ್ಟಬೇಕು ಎಂದು ಜಿ.ಎಂ.ಹೆಗಡೆ ಹೆಗ್ನೂರು, ನೆಲಮಾಂವ ಮಠದ ಅಧ್ಯಕ್ಷರು ಒತ್ತಾಯ ಮಾಡಿದರು. ಗೋಪಾಲಕೃಷ್ಣ ತಂಗರ‍್ಮನೆ, ಡಾ|| ಜಿ.ವಿ. ಹೆಗಡೆ, ಮಹೇಶ್ ಮುಕ್ರಮನೆ, ರತ್ನಾಕರ ಬಾಡಲಕೊಪ್ಪ ಹಾಗೂ ಹೇರೂರು, ತಟ್ಟಿಕೈ, ಸೋಂದಾ, ಭೈರುಂಬೆ, ಯಡಳ್ಳಿ ಭಾಗದ ರೈತರು ನಿಯೋಗ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡರು. ಜಾನ್ಮನೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಭಾಗವಹಿಸಿ
ನೆಲಮಾಂವ್‌ನಲ್ಲಿ ಬಿದಿರು ಅಭಿವೃದ್ಧಿ ಕಾರ್ಯಕ್ರಮಕ್ಕೆ ಶೀಘ್ರದಲ್ಲಿ ಮುಂದಾಗುತ್ತೇವೆ ಎಂದರು. ವೃಕ್ಷ ಆಂದೋಲನ ಸಂಚಾಲಕ ಗಣಪತಿ.ಕೆ.ಬಿಸಲಕೊಪ್ಪ ಧನ್ಯವಾದ ನೀಡಿದರು.