ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜಿನ ನೂತನ ಕಟ್ಟಡದ ಶಂಕುಸ್ಥಾಪನೆ ಸಮಾರಂಭವು ಶನಿವಾರ ಜರುಗಿತು.
ರೂ.8 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಸತಿ ಕಾಲೇಜಿನ ಕಟ್ಟಡದ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಆರ್.ವಿ.ದೇಶಪಾಂಡೆ ಇಂದು ಸ್ಪರ್ಧಾತ್ಮಕ ಜಗತ್ತನ್ನು ನೋಡುತ್ತಿದ್ದೇವೆ. ಅದಕ್ಕೆ ಕಾರಣ ಆ ಪ್ರಮಾಣದಲ್ಲಿ ಶೈಕ್ಷಣಿಕ ಕ್ಷೇತ್ರ ಬಲವರ್ಧನೆಗೊಂಡಿದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಅತ್ಯಂತ ಬದ್ಧತೆಯಿಂದ ಹಾಗೂ ಮೊದಲ ಆದ್ಯತೆಯಡಿ ಕೆಲಸ ನಿರ್ವಹಿಸಿಕೊಂಡು ಬರಲಾಗಿದೆ. ಅಲ್ಪಸಂಖ್ಯಾತ ಸಮುದಾಯದವರು ಆರ್ಥಿಕವಾಗಿ ಬಡವರಾಗಿರುವುದರಿಂದ, ಅವರ ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಇಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜನ್ನು ಪ್ರಾರಂಭಿಸಲಾಗಿದೆ. ಇದು ಜಿಲ್ಲೆಯಲ್ಲಿಯೇ ಮೊದಲ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗುಣಮಟ್ಟದ ಶಿಕ್ಷಣಕ್ಕೆ ಇಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುತ್ತಿದೆ. ಇಲ್ಲಿಯ ವಸತಿ ಶಾಲೆಗೆ ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲ ಮಕ್ಕಳ ಸಂಖ್ಯೆ ಕಡಿಮೆ ಇರುವುದು ನನಗಂತೂ ಆ ಬಗ್ಗೆ ಬೇಸರವಿದೆ. ಹೊರಜಿಲ್ಲೆಗಳ ಸಾಕಷ್ಟು ಮಕ್ಕಳು ಇಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. 8 ಕೋಟಿ ರೂ ವೆಚ್ಚದಲ್ಲಿ ನೂತನ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣಗೊಳ್ಳಲಿದ್ದು, ಕಟ್ಟಡದ ನಿರ್ಮಾಣ ಕಾರ್ಯ ಗುಣಮಟ್ಟದಿಂದ ಕೂಡಿರಬೇಕೆಂದು ಕರೆ ನೀಡಿದರು. ನಮ್ಮ ದೇಶದ ಪ್ರಗತಿ ಶಿಕ್ಷಣ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಪಾಲಕರು ಮಕ್ಕಳಿಗೆ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣವನ್ನು ನೀಡುವುದನ್ನು ಆದ್ಯ ಕರ್ತವ್ಯವನ್ನಾಗಿಸಬೇಕೆಂದು ಕರೆ ನೀಡಿದರು.
ದೇಶದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕು:
ದೇಶಪಾಂಡೆ ಇದೇ ಸಂದರ್ಭದಲ್ಲಿ ಉಗ್ರರ ದಾಳಿಗೆ ಪ್ರತ್ಯುತ್ತರವನ್ನು ನೀಡಿ ಭಾರತೀಯ ಸೈನ್ಯದ ಕೆಚ್ಚೆದೆಯ ಸಾಹಸವನ್ನು ಭಾರತೀಯರಾದ ನಾವೆಲ್ಲರೂ ಪಕ್ಷಾತೀತವಾಗಿ, ಜಾತಿ, ಧರ್ಮ ಮರೆತು ಒಂದಾಗಿ ಅಭಿನಂದಿಸಬೇಕೆಂದರು. ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ನಾಶ ಮಾಡುವ ಮೂಲಕ ಪಹಲ್ಗಾಮ್ ದಾಳಿಗೆ ತಕ್ಮ ಪಾಠವನ್ನು ನಮ್ಮ ಸೈನಿಕರು ಕಲಿಸಿದ್ದಾರೆ. ದೇಶದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ದೇಶದ ಪರ ನಿಲ್ಲಬೇಕು. ಈ ದೇಶದ ಪ್ರತಿಯೊಬ್ಬರು ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಲಿಂಗ ಜಾಧವ, ನಗರ ಸಭಾ ಸದಸ್ಯ ಸಂಜಯ ನಂದ್ಯಾಳ್ಕರ, ಅಲ್ಪಸಂಖ್ಯಾತ ಕಲ್ಯಡಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ ಗದ್ದಿಗೌಡರ, ತಹಶೀಲ್ದಾರ್ ಶೈಲೇಶ ಪರಮಾನಂದ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಟಿ.ಸಿ.ಹಾದಿಮನಿ, ನಗರ ಸಭೆಯ ಪೌರಾಯುಕ್ತ ವಿವೇಕ ಬನ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜಿನ ಪ್ರಾಚಾರ್ಯ ಪ್ರಶಾಂತ ಜಡೇನವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಅಮ್ರೀನ್ ಕಿತ್ತೂರು ವಂದಿಸಿದರು. ಉಪನ್ಯಾಸಕಿ ಸುಖಾದೇವಿ ಗುರವ ಕಾರ್ಯಕ್ರಮವನ್ನು ನಿರೂಪಿಸಿದರು.