ಶಿರಸಿ: ಸುಮಾರು ಒಂದೂವರೆ ತಿಂಗಳಿನಿಂದ ತಾಲೂಕಿನ ಮುಖ್ಯ ಅಧಿಕಾರಿಗಳಾದ, ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಇರದಿದ್ದ ಕಾರಣದಿಂದ, ಎಲ್ಲಾ ಇಲಾಖೆಗಳಲ್ಲಿನ ಕೆಲಸದ ಪ್ರಗತಿ ಕುಂಠಿತಗೊಂಡಿರುವುದು ಅತ್ಯಂತ ದುರದುಷ್ಟಕರ. ಅವರ ಬದಲಾಗಿ ಇನ್ ಚಾರ್ಜ್ ಎಂದು ಅಪರೂಪಕ್ಕೆ ಯಾರೋ ಒಬ್ಬರು ಬಂದು ಹೋಗುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಹೆಚ್ಚು ಗ್ರಾಮೀಣ ಪ್ರದೇಶಗಳ ಒಳಗೊಂಡ ಶಿರಸಿ ತಾಲೂಕಿನಲ್ಲಿ ಬೆಟ್ಟದಷ್ಟು ಸಮಸ್ಯೆಗಳಿವೆ. ಶಿರಸಿಯಲ್ಲಿ ಆಡಳಿತ ಯಂತ್ರ ಬದುಕಿದೆಯೋ ಸತ್ತಿದೆಯೋ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ ಎಂದ ಅವರು, ಈ ಹಿನ್ನೆಲೆಯಲ್ಲಿ ಶಿರಸಿಯ ಸಮಸ್ತ ಜನರ ಪರವಾಗಿ ಮೇ 19, ಸೋಮವಾರ ಬೆಳಿಗ್ಗೆ 11 ಗಂಟೆಗೆ ಶಿರಸಿಯ ಸಹಾಯಕ ಆಯುಕ್ತರ ಕಚೇರಿಯಲ್ಲಿ ತಕ್ಷಣ ತಹಶೀಲ್ದಾರ್ ನೇಮಕಾತಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಅವರು ಕೋರಿದ್ದಾರೆ.