ಹೊನ್ನಾವರ : ರಾಜ್ಯದ ವಿವಿಧೆಡೆ ಹಿಂದುಗಳ ಸಂಪ್ರದಾಯ, ಸಂಸ್ಕೃತಿಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ, ಇತ್ತಿಚಿಗೆ ಜಮ್ಮುಕಾಶ್ಮಿರದಲ್ಲಿ ಉಗ್ರರು ನಡೆಸಿದ ಹೀನ ಕೃತ್ಯ ಖಂಡಿಸಿ, ಪಟ್ಟಣದಲ್ಲಿ ಹಿಂದು ಸಮಾಜ ಬಾದಂವರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಕರ್ನಾಟಕದ ಕಾಂಗ್ರೆಸ್ ಸರಕಾರ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತದೆ. ವಿರೋಧ ಪಕ್ಷಗಳ ಮೇಲೆ ಎಫ್.ಐ.ಆರ್. ದಾಖಲಿಸುತ್ತದೆ. ಇದು ಎಫ್.ಐ.ಆರ್. ಸರಕಾರ ಎಂದು ಆರೋಪಿಸಿದರು.
ಹಿಂದುಗಳ ಧಾರ್ಮಿಕ ನಂಬಿಕೆಗಳಾದ ಜನಿವಾರ, ಮಾಂಗಲ್ಯ, ಕಾಲುಂಗುರ, ಕೈಬಳೆ ತೆಗೆಸುವುದರ ವಿರುದ್ದ ಎಲ್ಲರೂ ಒಟ್ಟಾಗಿ ವಿರೋಧಮಾಡಬೇಕು ಎಂದರು. ಜಮ್ಮು-ಕಾಶ್ಮೀರದಲ್ಲಿ ದಾಳಿ ಮಾಡಿದ ಭಯೋತ್ಪಾದಕರ ವಿರುದ್ದ ಕಠಿಣ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡುತ್ತಿದೆ ಎಂದರು.
ಶಿಕ್ಷಣ ಪ್ರಕೋಷ್ಟದ ವಕ್ತಾರರಾದ ಎಂ.ಜಿ.ಭಟ್ ಕೂಜಳ್ಳಿ ಮಾತನಾಡಿ ಹಿಂದು ಸಮಾಜದ ಭಾವನೆಗಳಿಗೆ ಧಕ್ಕೆ ತರುವುದರ ವಿರುದ್ದ ಜಾಗೃತವಾಗಬೇಕು ಎಂದರು. ಕೇಂದ್ರ ಸರಕಾರ ಪಾಕಿಸ್ತಾನವಷ್ಟೇ ಅಲ್ಲದೇ ಬಾಂಗ್ಲಾದಿಂದ ಬಂದಿರುವ ಮುಸ್ಲೀಂಮರನ್ನೂ ಹೊರಗೆ ಕಳಿಸಬೇಕು ಎಂದು ಮನವಿ ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಹಿಂದುಗಳ ಮೇಲೆ ಅಪಚಾರವಾಗುತ್ತಿದೆ ಎಂದು ಆಪಾದಿಸಿದರು. ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ ಶೆಟ್ಟಿ ಹತ್ಯೆಯನ್ನು ಖಂಡಿಸಿದರು.
ಮಾಜಿ ಜಿ.ಪಂ.ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಎಲ್ಲ ಹಿಂದುಗಳೂ ಒಂದಾಗುವ ಅನಿವಾರ್ಯತೆ ಇದೆ ಎಂದರು.
ಕೇಶವ ನಾಯ್ಕ ಬಳಕೂರು ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರ ಹಿಂದುಗಳ ಭಾವನೆಗಳ ಮೇಲೆ ಗಧಾಪ್ರಹಾರ ಮಾಡುತ್ತಿದೆ ಎಂದು ಆಪಾದಿಸಿದರು
ಜಿ.ಪಂ.ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಎಲ್ಲರಿಗೂ ಅವರವರ ಧಾರ್ಮಿಕ ಹಕ್ಕನ್ನು ಆಚರಿಸಲು ಹಕ್ಕಿದೆ ಎನ್ನುವ ರಾಜ್ಯ ಕಾಂಗ್ರೆಸ್ ಸರಕಾರದಿಂದಲೇ ಹಿಂದುಗಳ ಭಾವನೆಗೆ ಧಕ್ಕೆ ಆಗುತ್ತಿದೆ ಎಂದರು.
ಬಿಜೆಪಿ ತಾಲೂಕಾ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ ಹಿಂದೂ ಸಮಾಜದ ಶಾಂತ ಸ್ವಭಾವವನ್ನು ವಿರೋಧಿಗಳು ದುರೂಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.
ಪ್ರತಿಭಟನೆಯಲ್ಲಿ ಪ.ಪಂ. ಅಧ್ಯಕ್ಷ ನಾಗರಾಜ ಭಟ್, ಮುಖಂಡರಾದ ಶಿವರಾಜ ಮೇಸ್ತ. ಮಹೇಶ ಮೇಸ್ತ, ಎಂ.ಎಸ್.ಹೆಗಡೆ ಕಣ್ಣಿಮನೆ, ಎಚ್.ಆರ್.ಗಣೇಶ, ನಾರಾಯಣ ಹೆಗಡೆ, ಅಜಿತ ನಾಯ್ಕ, ಗಣಪತಿ ನಾಯ್ಕ ಬಿಟಿ, ಗಣಪತಿ ಗೌಡ ಚಿತ್ತಾರ, ಮಾರುತಿ ನಾಯ್ಕ, ಶ್ರೀಕಾಂತ ಮೊಗೇರ, ಉಮೇಶ ಮೇಸ್ತ, ಗೋವಿಂದ ಗೌಡ, ಕೃಷ್ಣ ಜೋಶಿ, ರತ್ನಾಕರ ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
