ದಾಂಡೇಲಿ : ನಗರದ ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಕಾಂಕ್ರೀಟ್ ಕೆಲಸ ಮುಗಿಸಿ ಸಂಜೆ ಮನೆಗೆ ಹೊರಡುತ್ತಿರುವ ಸಂದರ್ಭದಲ್ಲಿ ಕರಿ ಕೋತಿಯೊಂದು ಕಚ್ಚಿ, ಕಾಲಿಗೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಅಂಬೇವಾಡಿಯ ನವಗ್ರಾಮದ ನಿವಾಸಿ ಪ್ರವೀಣ್ ವೆಂಕಟೇಶ ವಾಸಂದರ ಅವರು ಸೂಕ್ತ ಪರಿಹಾರಕ್ಕಾಗಿ ಸಂಬಂಧಪಟ್ಟ ಇಲಾಖೆಯವರಿಗೆ ಮನವಿಯನ್ನು ಮಾಡಿದ್ದಾರೆ.
ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಅವರು ಸೂಕ್ತ ಪರಿಹಾರವನ್ನು ನೀಡುವಂತೆ ಸೋಮವಾರ ಮಾಧ್ಯಮದ ಮೂಲಕ ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ. ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಪ್ರವೀಣ್ ಕೆಲಸ ಮುಗಿಸಿ ಸಂಜೆ ಮನೆಗೆ ಹೊರಡುವ ಸಮಯದಲ್ಲಿ ಕರಿ ಕೋತಿ ಕಚ್ಚಿ ಗಂಭೀರ ಗಾಯಗೊಳಿಸಿದೆ. ಇಎಸ್‌ಐ ಆಸ್ಪತ್ರೆಯವರು ಗಾಯಗೊಂಡ ಪ್ರವೀಣ್ ಅವರ ಕಾಲಿಗೆ ಹೊಲಿಗೆ ಹಾಕಿ ಮರುದಿನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದಾರೆ. ಆನಂತರ ಪ್ರವೀಣ್ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ವೈದ್ಯರು ನೀಡಿದ ಸಲಹೆಯಂತೆ ಇನ್ನು ಎರಡ್ಮೂರು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಪ್ರವೀಣ್ ಅವರಿಗಿದ್ದು, ಇದೀಗ ಅವರ ಜೀವನ ದುಸ್ತರವಾಗಿದೆ. ದುಡಿಮೆ ಮಾಡಲು ಸಾಧ್ಯವಾಗದಿರುವುದರಿಂದ ಹಾಗೂ ಆರ್ಥಿಕವಾಗಿ ತೀರಾ ಬಡವನಾಗಿರುವುದರಿಂದ ಬದುಕು ನಡೆಸುವುದಾದರೂ ಹೇಗೆ ಎಂಬ ಚಿಂತೆ ಪ್ರವೀಣ್ ಅವರನ್ನು ಕಾಡತೊಡಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ಕಾರ್ಮಿಕ ಪ್ರವೀಣ್ ಅವರಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನು ನೀಡುಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.