ಶಿರಸಿ: ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಹಾಗೂ ಅವಿನಾಶಿ ಸಂಸ್ಥೆ ಜಂಟಿಯಾಗಿ ತಾಲೂಕಿನ ವಾನಳ್ಳಿಯ ಸೇವಾ ಸಹಕಾರಿ ಸಂಘದಲ್ಲಿ ಏ.15 ರಂದು ಸಂಜೆ 5.40ಕ್ಕೆ ‘ಸುರ ಸಾನಿಕ’ ವೇಣು ವಾದನ, ಸಮ್ಮಾನ, ಯಕ್ಷ ರೂಪಕ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆರಂಭದಲ್ಲಿ ವೇಣು ವಾದನದಲ್ಲಿ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದ ಕಲ್ಲಾರೆಮನೆ ಪ್ರಕಾಶ ಹೆಗಡೆ ಕೊಳಲು ನುಡಿಸುವರು. ತಬಲಾದಲ್ಲಿ ಕಾರ್ತೀಕ ಭಟ್ಟ ಸಹಕಾರ ನೀಡುವರು. ೬:೫೦ಕ್ಕೆ ವೇಣು ವಾದಕ ಕಲ್ಲಾರೆಮನೆ ಪ್ರಕಾಶ ಹೆಗಡೆ ಅವರಿಗೆ ಸಮ್ಮಾನ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ, ಪ್ರಜಾವಾಣಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ವಹಿಸಲಿದ್ದಾರೆ. ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ದೀಪಕ ದೊಡ್ಡೂರು, ಸೊಸೈಟಿ ಅಧ್ಯಕ್ಷ ಎಂ.ಎ.ಹೆಗಡೆ ಕಾನಮುಷ್ಕಿ ಭಾಗವಹಿಸುವರು.
ಸಂಜೆ ೭:೪೫ಕ್ಕೆ ವಿಶ್ವಶಾಂತಿ ಸರಣಿಯ ಹತ್ತನೇ ಕಲಾಕುಸುಮ ವಿಶ್ವಾಭಿಗಮನಮ್ ಯಕ್ಷ ನೃತ್ಯ ರೂಪಕ ಪ್ರದರ್ಶನವನ್ನು ಕು. ತುಳಸಿ ಹೆಗಡೆ ಪ್ರದರ್ಶಿಸಲಿದ್ದಾರೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಸಾಹಿತ್ಯದ, ವಿ. ಉಮಾಕಾಂತ ಭಟ್ಟ ಕೆರೇಕೈ ನಿರ್ದೇಶನದ ರೂಪಕವನ್ನು ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ನಡೆಸಿಕೊಡಲಿದ್ದಾರೆ. ಮದ್ದಲೆಯಲ್ಲಿ ಶಂಕರ ಭಾಗವತ್, ಚಂಡೆಯಲ್ಲಿ ವಿಘ್ನೇಶ್ವರ ಗೌಡ ಕೆಸ್ರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ, ಧ್ವನಿ ಬೆಳಕಿನಲ್ಲಿ ಉದಯ ಪೂಜಾರ ಸಹಕಾರ ನೀಡಲಿದ್ದಾರೆ ಎಂದು ಟ್ರಸ್ಟ್ ಉಪಾಧ್ಯಕ್ಷ ರಮೇಶ ಹಳೆ ಕಾನಗೋಡ, ಕಾರ್ಯದರ್ಶಿ ಗಾಯತ್ರೀ ರಾಘವೇಂದ್ರ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.