ಸಿದ್ದಾಪುರ: ಪಟ್ಟಣದ ಸಮಾಜ ಮಂದಿರದ ಕುರಿತಾದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಅಂಗಡಿ ನಡೆಸಲು ಬಾಡಿಗೆಗೆ ನೀಡಿರುವ ಪಪಂ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ ಎಂ.ಆರ್. ಕುಲಕರ್ಣಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪಟ್ಟಣದ ಸರ್ವೆ ನಂ. 267/ಬ2ರಲ್ಲಿ 1ಎಕರೆ ಪ್ರದೇಶವನ್ನು 1950ರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೆಸರಿಗೆ ಮಂಜೂರು ಮಾಡಿಕೊಡಲಾಗಿತ್ತು. 2013 ರವರೆಗೆ ದಾಖಲೆಗಳಲ್ಲಿ ಇದೇ ರೀತಿ ಇದ್ದಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅನಧಿಕೃತವಾಗಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೆಸರಿಗೆ ವರ್ಗಾಯಿಸಲಾಗಿತ್ತು .
ಈ ಕುರಿತು ನಾವು ಎಲ್ಲ ದಾಖಲೆಗಳೊಂದಿಗೆ ಹೈಕೋರ್ಟನಲ್ಲಿ ದಾವೆ ಹೂಡಿದ್ದೆವು. 23-11-2023 ರಲ್ಲಿ ನ್ಯಾಯಾಲಯ ಈ ಜಾಗವನ್ನು ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಿದ್ದಾಪುರ ಹೆಸರಿಗೆ ವರ್ಗಾಯಿಸುವಂತೆ ಆದೇಶಿಸಿತ್ತು.ಆದರೆ ಇಲ್ಲಿಯವರಗೆ ಈ ಕಾರ್ಯವನ್ನು ಸಂಬಂಧಿಸಿದ ಇಲಾಖೆ ಮಾಡಿಲ್ಲ. ಫೆ.26ರಂದು ಪಪಂ ಮುಖ್ಯಾಧಿಕಾರಿ ಹತು ಸಾವಿರ ರೂ. ಮುಂಗಡ ಪಡೆದು ಈ ಜಾಗವನ್ನು ಅನಧಿಕೃತವಾಗಿ ಬಾಡಿಗೆ ನೀಡಿದ್ದಾರೆ. ಇದು ನ್ಯಾಯಾಂಗ ನಿಂದನೆಯಾಗಿದ್ದು ನ್ಯಾಯಾಲಯಕ್ಕೆ ಅಗೌರವ ತೋರಿಸಿರುವ,ನಿಂದನೆ ಮಾಡಿರುವ ಮುಖ್ಯಾಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಹಾಗೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಾರುತಿ ಕಿಂದ್ರಿ,ತಾಲೂಕು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಹೆಗಡೆ,ಪ್ರಮುಖರಾದ ವಿ.ಎನ್.ನಾಯ್ಕ ಬೇಡ್ಕಣಿ, ಗಾಂಧೀಜಿ ನಾಯ್ಕ,ಸುರೇಂದ್ರ ಗೌಡ,ಲೀನಾ ಫರ್ನಾಂಡಿಸ್, ಸುರೇಂದ್ರ, ಶಾರದಾ ಹೆಗಡೆ,ಕೆ.ಟಿ.ಹೊನ್ನೆಗುಂಡಿ, ಎಂ.ಎಸ್.ಹೆಗಡೆ ಇತರರಿದ್ದರು.