ಸಿದ್ದಾಪುರ: ಯಕ್ಷಗಾನ ಕಲೆಯನ್ನು ಗೌರವಿಸುವುದರ ಜತೆಗೆ ಕಲಾವಿದರನ್ನು ಗುರುತಿಸಿ ಅವರನ್ನು ಅಭಿನಂದಿಸುವುದು ಅತಿ ಅವಶ್ಯ. ಯಕ್ಷಗಾನದ ಮೂಲಕ ಧಾರ್ಮಿಕ ಭಾವನೆ ಹಾಗೂ ನಂಬಿಕೆ ಮತ್ತಷ್ಟು ಹೆಚ್ಚುತ್ತದೆ ಎಂದು ಹಿರಿಯರಾದ ಎನ್.ವಿ.ಹೆಗಡೆ ಮುತ್ತಿಗೆ ಹೇಳಿದರು.
ತಾಲೂಕಿನ ಪೂಜಾರಿಕೊಪ್ಪ,ಅರಿಶಿನಗೋಡ ಹಾಗೂ ಕೋಣೆಗದ್ದೆಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ 8ನೇ ವರ್ಷದ ಸಮಾರಾಧನೆ ಪ್ರಯುಕ್ತ ಯಕ್ಷಗಾನ ಕಲಾವಿದರಿಗೆ ಆಯೋಜಿಸಿದ್ದ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಸೋಮವಾರ ಮಾತನಾಡಿದರು.
ಧನಂಜಯ ನಾಯ್ಕ ಪೂಜಾರಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು.ಬಿದ್ರಕಾನ ಗ್ರಾಪಂ ಕಾರ್ಯದರ್ಶಿ ಆರ್.ಬಿ.ಗೌಡ, ಗಣಪತಿ ನಾಯ್ಕ ಪೂಜಾರಿಕೊಪ್ಪ, ಗಣೇಶ ಹೆಗಡೆ ಅರಶಿನಗೋಡ ಉಪಸ್ಥಿತರಿದ್ದರು.
ದಿ. ದುರ್ಗಾ ಸುಬ್ಬ ನಾಯ್ಕ ಅರಶಿನಗೋಡ ಕುಟುಂಬದವರು ಯಕ್ಷಗಾನ ಭಾಗವತ ಪರಮೇಶ್ವರ ನಾಯ್ಕ ಕಾನಗೋಡ ಹಾಗೂ ಹವ್ಯಾಸಿ ಕಲಾವಿದ ಜೈಕುಮಾರ ನಾಯ್ಕ ಮೆಣಸಿ ಇವರನ್ನು ಸನ್ಮಾನಿಸಿದರು. ಸನ್ಮಾನಿತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನರೇಂದ್ರ ನಾಯ್ಕ ಪೂಜಾರಿಕೊಪ್ಪ ಸ್ವಾಗತಿಸಿದರು. ಭರತಕುಮಾರ ನಾಯ್ಕ ಸನ್ಮಾನ ಪತ್ರ ವಾಚಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು. ನಂತರ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಬೇಡ್ಕಣಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಗದಾಯುದ್ಧ ಯಕ್ಷಗಾನ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿತು.
ಬೆಳಗ್ಗೆ ದೇವಸ್ಥಾನದಲ್ಲಿ ಕಲಾವೃದ್ಧಿ ಹೋಮ, ರುದ್ರಹೋಮ, 108 ಶ್ರೀ ಸತ್ಯನಾರಾಯಣ ಕಳಸ ಪೂಜೆ, ಗಣಹೋಮ, ಕುಂಕುಮಾರ್ಚನೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ಮ ಸಂತರ್ಪಣೆ ನಡೆಯಿತು.