ಶಿರಸಿ: ಬೆಳಗಾವಿ ಜಿಲ್ಲೆ,ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಫೆ.28 ಮತ್ತು ಮಾರ್ಚ್ 1ರಂದು ಎರಡು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಬೆಳವಡಿ ಮಲ್ಲಮ್ಮನ ಉತ್ಸವವನ್ನು ಬೆಳಗಾವಿ ಜಿಲ್ಲಾಡಳಿತ ಹಮ್ಮಿಕೊಂಡಿದೆ.
ಇದರ ಅಂಗವಾಗಿ ಉತ್ಸವಕ್ಕೆ ಮಲ್ಲಮ್ಮನ ತವರೂರಾದ ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಂತರ ಮಠದಿಂದ ಶ್ರೀ ದೇವರಿಗೆ ಪೂಜೆ ಸಲ್ಲಿಸಿ ಜ್ಯೋತಿ ಹೊತ್ತಿಸಲಾಯಿತು. ಪೂಜಾ ಕೈಂಕರ್ಯವನ್ನು ಆಚಾರ್ಯ ಜಯಲಿಂಗ ಸ್ವಾಮಿ ಮಹಂತೀನ್ ಮಠ ಇವರ ನೇತೃತ್ವದಲ್ಲಿ ಮಲ್ಲಿಕಾರ್ಜುನ್ ಮಹಂತಿನ ಮತ್ತು ನಾಗರಾಜ ಮಹಂತಿನ್ ಮಠ ನೆರವೇರಿಸಿ, ಮಾತೆಯರಿಗೆ ಅರಿಶಿಣ ಕುಂಕುಮ ನೀಡಿ ತವರೂರ ಬಾಗೀನ,ಉಡಿತುಂಬುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಂತರ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಬೆಳವಡಿಯ ಬಸಯ್ಯ ವಿರಕ್ತಮಠ, ರಾಣಿ ಮಲ್ಲಮ್ಮನ ಶೌರ್ಯ ಸಾಹಸಗಳನ್ನು ಈಶಪ್ರಭುವಿನ ಮಡದಿಯಾಗಿ ಬೆಳವಡಿಯ ನಾಡನ್ನ ರಕ್ಷಣೆ ಮಾಡುವುದರೊಂದಿಗೆ ರಾಜ್ಯ ಸುಭಿಕ್ಷವಾಗಿ ಪ್ರಜೆಗಳು ಸಂತೋಷದಿಂದ ಇರಲು ಮಲ್ಲಮ್ಮಾಜಿಯ ಕೊಡುಗೆ ಅಪಾರವಾಗಿದೆ ಎಂದರು.
ಬೆಳವಡಿ ಗ್ರಾಮ ಪಂಚಾಯತ ಅಧ್ಯಕ್ಷ ಚಂದ್ರಶೇಖರ ಕಾರೀಮನಿ ಮಲ್ಲಮ್ಮನ ತವರೂರಿಂದ ಜ್ಯೋತಿ ಒಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಇಂತಹ ಪವಿತ್ರ ಕಾರ್ಯದಲ್ಲಿ ಬೆಳವಡಿಯ ಪಂಚಾಯತದಿಂದ ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದು,ಎರಡು ದಿನಗಳ ಕಾಲ ನಡೆಯುವ ಈ ಅದ್ದೂರಿಯ ಉತ್ಸವಕ್ಕೆ ಸುಧಾಪುರ ಕ್ಷೇತ್ರದಿಂದ ಎಲ್ಲಾ ನಾಗರಿಕರು ಹಾಗೂ ಅಧಿಕಾರಿಗಳನ್ನು ಸೋಂದಾಗ್ರಾಮ ಪಂಚಾಯತ ಹಾಗೂ ಶಿರಸಿ ತಾಲೂಕ್ ಆಡಳಿತದವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಹೃತ್ಪೂರ್ವಕ ಆಮಂತ್ರಣ ನೀಡಿದರು. ಬೆಳವಡಿ ಮಲ್ಲಮ್ಮನ ಪ್ರಾಧಿಕಾರ ರಚನೆಯಾದರೆ ಬೆಳವಡಿ ಹಾಗೂ ಮಲ್ಲಮ್ಮನ ತವರೂರಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ಘನ ಕಾರ್ಯಕ್ಕೆ ನಾವು ಸುಧಾಪುರದ ಎಲ್ಲ ಸಂಘ ಸಂಸ್ಥೆಗಳ ಸೋಂದಾ ಗ್ರಾಮ ಪಂಚಾಯತ್ ಹಾಗೂ ಜನಪ್ರತಿ ನಿಧಿಗಳ ಸಂಪೂರ್ಣ ಸಹಕಾರವನ್ನು ಯಾಚಿಸುತ್ತೇವೆ ಎಂದರು.
1995 ರಿಂದ ಸುಧಾಪುರ ಕ್ಷೇತ್ರದಲ್ಲಿ ಎಲ್ಲಾ ಐತಿಹಾಸಿಕ ಗುಡಿ ಗೋಪುರಗಳ ಸಂರಕ್ಷಣೆಯನ್ನು ಸೋಂದ ಜಾಗೃತ ವೇದಿಕೆ ಮಾಡುತ್ತಿದ್ದು, 2012ರಿಂದ ಬೆಳವಡಿಯ ಮಲ್ಲಮ್ಮನ ಉತ್ಸವಕ್ಕೆ ಅವಳ ತವರೂರನಿಂದ ಜ್ಯೋತಿ ಒಯ್ಯುವ ಐತಿಹಾಸಿಕ ಕ್ಷಣಕ್ಕೆ ಸೋಂದಾ ಜಾಗೃತ ವೇದಿಕೆ ಮೂಲ ಕಾರಣವಾಗಿದ್ದು,2017 ರಿಂದ ಸೋಂದಾ ಗ್ರಾಮ ಪಂಚಾಯತ ಸ್ಥಳೀಯವಾಗಿ ನೇತೃತ್ವ ವಹಿಸಿ ತಾಲೂಕ ಕಂದಾಯ ಇಲಾಖೆಯವರ ಸಹಕಾರದಿಂದ ಈ ಕಾರ್ಯ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದು ಸೋಂದಾ ಜಾಗೃತ ವೇದಿಕೆಯ ಕಾರ್ಯಧ್ಯಕ್ಷ ರತ್ನಾಕರ್ ಹೆಗಡೆ ಬಾಡಲಕೊಪ್ಪ ಹೇಳಿದರು.
ಸೋಂದಾ ಗ್ರಾಮ ಪಂಚಾಯತ ಅಧ್ಯಕ್ಷ ರಾಮಚಂದ್ರ ಹೆಗಡೆ ಹೊಸಗದ್ದೆ ಸಭಾಧ್ಯಕ್ಷ ಸ್ಥಾನದಿಂದ ಬೆಳವಡಿ ಉತ್ಸವದ ಆಮಂತ್ರಣವನ್ನು ನಾಗರಿಕರ ಪರವಾಗಿ ಸ್ವೀಕರಿಸಿ, ಮಾತನಾಡಿ,ಸುಮಾರು 500 ವರ್ಷಗಳ ಸುಧಾಪುರ ಇತಿಹಾಸ, ಬೆಳವಡಿ ಮತ್ತು ಸೋಂದಾಕ್ಕೆ ಇರುವ ಸಂಬಂಧ,ಬೆಳವಡಿ ಉತ್ಸವದ ಮುಖಾಂತರ ಮರುಕಳಿಸುತ್ತಿದೆ, ಈ ಐತಿಹಾಸಿಕ ನಂಟಿಗೆನಾವು ನೀವೆಲ್ಲ ಸಾಕ್ಷಿಯಾಗೋಣ ಎಂದರು.
ಜ್ಯೋತಿ ಹಸ್ತಾಂತರ ಕಾರ್ಯದಲ್ಲಿ ಸೋಂದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಹೆಗಡೆ ಉಪಾಧ್ಯಕ್ಷೆ ಭಾರತೀ ಚೆನ್ನಯ್ಯ ಸದಸ್ಯರಾದ ಗಜಾನನ್ ನಾಯಕ್ ಮಂಜುನಾಥ್ ಬಂಡಾರಿ ಮಮತಾ ಜೈನ,ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಚಂದ್ರಕಾಂತಗೌಡ ಗ್ರಾಮ ಆಡಳಿತ ಅಧಿಕಾರಿಗಳಾದ ಕಾವ್ಯ ಕೆ. ಇವರಿಂದ ಜ್ಯೋತಿ ಪಡೆಯಲು ಬೆಳವಡಿ ಗ್ರಾಮ ಪಂಚಾಯತ ಅಧ್ಯಕ್ಷ ಚಂದ್ರಶೇಖರ ಕಾರಿಮನಿ ಸದಸ್ಯರಾದ ಬಸಯ್ಯ ವಿರಕ್ತಮಠ, ಬಿ.ಜಿ.ದೊಂಗಾವಿ ಉಪಾಧ್ಯಕ್ಷ ಸಂಗೀತಾ ಕನೇಕರ, ರೇಣುಕಾ ಕುರಿ, ಮಂಜುಳಾ ಮಟ್ಟಿ, ಯಲ್ಲಪ್ಪಾ ಬಾರ್ಕಿ, ವಿಶ್ವನಾಥ ಕರಿಕಟ್ಟಿ, ಗಜಾನಂದ ರಾಣೋಜಿ ಇದ್ದರು ವಿಜಯವಾಣಿ ಬೆಳಗಾವಿ ಜಿಲ್ಲಾ ವಿಜಯವಾಣಿ ಪತ್ರಕರ್ತರು, ಹಾಯ್ ಮಲಪ್ರಭಾ ಪತ್ರಿಕೆ ಸಂಪಾದಕ ಯಾಸಿನ್ ಕಿತ್ತೂರು ಮತ್ತು ಬೆಳವಡಿಯ ಭಗತ್ ಸಿಂಗ್ ಗೆಳೆಯರ ಬಳಗದ ಸದಸ್ಯರು ಜ್ಯೋತಿಯನ್ನು ಪಡೆದುಕೊಂಡರು. ಮಹಂತರ ಮಠದಿಂದ ಮೆರವಣಿಗೆಯಲ್ಲಿ ಹೊರಟ ಜ್ಯೋತಿ ಸೋದೆ ಶ್ರೀ ವಾದಿರಾಜ ಮಠ, ಸ್ವಾದಿ ಶ್ರೀ ಜೈನಮಠ ಹಾಗೂ ಶ್ರೀಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದಲೂ ಪೂಜೆ ಸಲ್ಲಿಸಿ ಗೌರವಾದರಗಳಿಂದ ಬೀಳ್ಕೊಡಲಾಯಿತು.
ಸೋಂದಾಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪನವರು ಎಲ್ಲರನ್ನ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಆಭರಮನ್ನಣೆ ಮಾಡಿದರು ಸಂತೋಷ ಹೆಗಡೆ ಸಹಕರಿಸಿದರು.