ಹೊನ್ನಾವರ : ಸಾಹಿತ್ಯ ಎಲ್ಲರಿಗಾಗಿ ಅಲ್ಲ. ಯಾರು ಅಧ್ಯಯನಶೀಲರಾಗಿ ಓದು-ಬರಹವನ್ನು ಬದುಕಿನ ಭಾಗವಾಗಿ ಮುಂದುವರಿಸುತ್ತಾರೊ ಅಂತವರಿಂದ ಸಾಹಿತ್ಯ ರಚನೆ ಸಾಧ್ಯ, ಸಾಹಿತ್ಯದ ಬರಹ ಬದುಕಿನ ಭಾಗವಾದಾಗ ಮಾತ್ರ ಕೃತಿಯ ಜೊತೆಗೆ ಸಾಹಿತಿಗೂ ಸಮಾಜದಲ್ಲಿ ಉನ್ನತ ಗೌರವ ಸಿಗಲು ಸಾಧ್ಯ ಎಂದು ಶಿವಾನಿ ಟ್ರೇಡರ್ಸ್ ಮಾಲಿಕ ಕೃಷ್ಣಮೂರ್ತಿ ಭಟ್ ಹೇಳಿದರು.
ಪ್ರಭಾತ್ ನಗರದ ರೋಟರಿ ಪಾರ್ಕ್ ಹೌಸ್ ನಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತು ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಮತ್ತು ತಾಲೂಕಾ ಘಟಕ ಉದ್ಘಾಟನೆ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರದ ಪರಮಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಹೊನ್ನಿನ ಊರಾದ ಹೊನ್ನಾವರವು ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ ಸಂಘಟನೆಯ ಕೇಂದ್ರ ಬಿಂದುವಾಗಿದೆ. ಸಾಹಿತಿಯಾದವನು ಸಮಾಜದ ಕಣ್ಣಿದ್ದಂತೆ. ಬದುಕಿನ ಒಳ-ಹೊರ ದೃಷ್ಟಿಕೋನದ ಭಾಗವಾಗಿ ಸಾಹಿತ್ಯ ರಚಿಸುವಂತಾಗಬೇಕು. ಉಷಾ ನಾಯಕ್ ರವರಿಗೆ ಉತ್ತಮ ಸಾಹಿತಿಯಾಗುವ ಎಲ್ಲಾ ಲಕ್ಷಣಗಳಿವೆ ಎಂದು ಶುಭ ಹಾರೈಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಸೂರ್ಯಕಾಂತ್ ಸಾರಂಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಪರಿಷತ್ತು ಸಾಮಾನ್ಯ ಜನರಲ್ಲಿ ನಡೆದಿರುವ ಕಲೆಯನ್ನು ವೇದಿಕೆಯ ಮೂಲಕ ಪ್ರದರ್ಶಿಸಲು ಅವಕಾಶ ಕಲ್ಪಿಸಿದರೆ ತಾಲೂಕಿನಲ್ಲಿ ಇನ್ನಷ್ಟು ಸಾಂಸ್ಕೃತಿಕ ಮನಸ್ಸುಗಳು ಅರಳಲು ಸಾಧ್ಯ ಎಂದರು.
ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಮನೋಹರ ನಾಯಕ ಜಿಲ್ಲಾ ಮತ್ತು ತಾಲೂಕ ಘಟಕ ಉದ್ಘಾಟಿಸಿ ಮಾತನಾಡಿ, ನಮ್ಮ ಪರಿಷತ್ತಿನ ಮುಖ್ಯ ಉದ್ದೇಶವೇ ಸಾಂಸ್ಕೃತಿಕ ಬದುಕನ್ನು ಕಟ್ಟಿ ಬೆಳೆಸುವುದಾಗಿದೆ ಎಂದರು.
ಕವನ ಸಂಕಲನ ಬಿಡುಗಡೆ :
ಉಷಾ ನಾಯಕರವರ ‘ಭಾವ ಬರಿತ ಜೋಳಿಗೆ’ ಹಾಗೂ ‘ಕಾಯಕದೊಳಗಿನ ಕದಿರು’ ಎರಡು ಕವನ ಸಂಕಲನವನ್ನು ವಿಜಯಪುರದ ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಭಂಗಿಮಠ ಬಿಡುಗಡೆಗೊಳಿಸಿ ಮಾತನಾಡಿದರು.
ಸಾಹಿತಿಗಳಾದ ನಾರಾಯಣ ಯಾಜಿ, ಪಿ. ಆರ್. ನಾಯ್ಕ ಕೃತಿ ಪರಿಚಯಿಸಿದರು. ಜಿಲ್ಲಾಧ್ಯಕ್ಷೆ ಉಷಾ ನಾಯಕ ಕೃತಿ ರಚನೆಯ ಕುರಿತು ಮಾತನಾಡಿ, ನನ್ನ ಕುಟುಂಬದ ಬದುಕಿಗೆ ಬೆಳಕಾದ ಹೊನ್ನಾವರ ತಾಲೂಕಿನ ವೈದ್ಯರಿಗೆ ಎರಡು ಕೃತಿಯನ್ನು ಅರ್ಪಿಸಿದ್ದೇನೆ ಎಂದರು.
ವೇದಿಕೆಯಲ್ಲಿ ಯಸ್ವಿನ ಮನೋಹರ ನಾಯಕ, ನರರೋಗ ತಜ್ಞ ಡಾ. ರಾಘವೇಂದ್ರ ನಾಯಕ, ಜಿ.ಎಸ್. ಬಿರಾದಾರ, ಎಸ್. ಡಿ. ಮುಡಣ್ಣವರ, ಅಣ್ಣಪ್ಪ ಮುಕ್ರಿ, ಎಸ್.ಎಚ್. ಗೌಡ, ಸತೀಶ ತಾಂಡೇಲ, ದೀಪಾ ಕಾಮತ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹೊನ್ನಾವರ ತಾಲೂಕಿನ ವೈದ್ಯರಿಗೆ ರಾಷ್ಟ್ರೀಯ ವೈದ್ಯ ಸಂಜೀವಿನಿ ಗೌರವ ಸಮರ್ಪಣೆ ಮಾಡಲಾಯಿತು. ರಾಷ್ಟ್ರ, ರಾಜ್ಯ ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸತ್ಕರಿಸಲಾಯಿತು. ಪ್ರಾರಂಭದಲ್ಲಿ ಯೋಗೇಶ ನಾಯ್ಕ ಸ್ವಾಗತಿಸಿದರೆ, ಕಲಾವಿದ ರಾಜೇಶ ನಾಯಕ ವಂದಿಸಿದರು. ದಿನೇಶ ಕಾಮತ ನಿರೂಪಿಸಿದರು.