‘ಇನ್ನು ಪೋನ್ ಪೇ, ಗೂಗಲ್ ಪೇನಿಂದ ನೇರವಾಗಿ ಟಿಆರ್ಸಿ ಖಾತೆಗೆ ಹಣ ವರ್ಗಾಯಿಸಿ’
ಶಿರಸಿ: ಟಿಆರ್ಸಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಟಿಆರ್ಸಿ ಇ-ಕಲೆಕ್ಷನ್ ಸೇವೆಗೆ ಟಿಆರ್ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಚಾಲನೆ ನೀಡಿದರು.
ಆಧುನಿಕತೆಗೆ ತಕ್ಕಂತೆ ಸದಸ್ಯರಿಗೆ ವಿಶೇಷ ಸೇವಾ ಸೌಲಭ್ಯಗಳ್ನು ಒದಗಿಸುತ್ತಾ ಸಹಕಾರ ಕ್ಷೇತ್ರದಲ್ಲಿ ವೈಶಿಷ್ಟ್ಯತೆಯನ್ನು ಹೊಂದಿರುವ ಟಿಆರ್ಸಿಯ ತಂತ್ರಜ್ಞಾನ ಆಧಾರಿತ ಸೇವಾ ಸೌಲಭ್ಯಗಳಲ್ಲಿ ಇ-ಕಲೆಕ್ಷನ್ ಹೊಸದಾಗಿ ಸೇರ್ಪಡೆಗೊಂಡಂತಾಗಿದೆ. ಐಸಿಐಸಿಐ ಬ್ಯಾಂಕ್ನ ಸಹಯೋಗದೊಂದಿಗೆ ಇ-ಕಲೆಕ್ಷನ್ ಸೇವೆಯನ್ನು ಟಿಆರ್ಸಿ ಅಳವಡಿಸಿಕೊಂಡಿದ್ದು ಸದಸ್ಯರಿಗೆ ಹಣ ವರ್ಗಾವಣೆಗೆ ಇದು ಅನುಕೂಲವಾಗಿದೆ. ಅಲ್ಲದೆ ರಾಜ್ಯದಲ್ಲಿಯೇ ಈ ಸೇವೆಯನ್ನು ಆರಂಭಿಸಿದ ಮೊದಲ ಪ್ರಾಥಮಿಕ ಪತ್ತಿನ ಸಹಕಾರ ಸಂಘವೆಂಬ ಹೆಗ್ಗಳಿಕೆಗೆ ಟಿಆರ್ಸಿ ಪಾತ್ರವಾಗಿದೆ.
ಟಿಆರ್ಸಿ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಶ್ರೀಪಾದ ಭಟ್ಟ ಮಾವಿನಕೊಪ್ಪ ಮಾತನಾಡಿ, ಐಸಿಐಸಿಐ ಬ್ಯಾಂಕ್ನ ಇ-ಕಲೆಕ್ಷನ್ ಸೇವೆಯನ್ನು ನಮ್ಮ ಸಂಘವು ಅಳವಡಿಸಿಕೊಂಡಿರುವುದು ಸದಸ್ಯರ ವ್ಯವಹಾರಕ್ಕೆ ಹೆಚ್ಚಿನ ಅನುಕೂಲವಾಗಿದೆ. ಇತರ ಬ್ಯಾಂಕ್ನಿಂದ ನಮ್ಮ ಸಂಘದ ಖಾತೆಗೆ ಹಣ ಜಮಾ ಮಾಡಲು ಸಂಘಕ್ಕೆ ಪ್ರತ್ಯೇಕ ಐಎಫ್ಎಸ್ ಕೋಡ್ ದೊರೆತಿದೆ. ಸಂಘದ ಎಲ್ಲಾ ಸದಸ್ಯರಿಗೆ ಈ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕ್ರಮವಹಿಸಲಾಗುವುದು ಎಂದರು.
ಇ-ಕಲೆಕ್ಷನ್ ಸೌಲಭ್ಯವನ್ನು ಸಂಘದ ತಂತ್ರಾಂಶದೊಂದಿಗೆ ಹೊಂದಿಸಲು ಶ್ರಮಿಸಿದ ಐಸಿಐಸಿಐ ಬ್ಯಾಂಕ್, ಕಂಬಾರ ಸಾಫ್ಟ್ವೇರ್ ಸೊಲ್ಯೂ಼ನ್ಸ್ನ ಕೆ. ಆರ್. ಕಂಬಾರ ಹಾಗೂ ಆನ್ಲೈನ್ ಪ್ರೊಫೇಶನಲ್ ಸೊಲ್ಯೂ಼ನ್ಸ್ನ ಮಧುಸೂಧನ ಹೆಗಡೆ ಹೆಗ್ಗಾರ ಹಾಗೂ ಟಿಆರ್ಸಿಯ ತಾಂತ್ರಿಕ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹೆಗಡೆ ಭೈರೀಮನೆ ಅವರ ಶ್ರಮವನ್ನು ಶ್ಲಾಘಿಸಿದರು. ವಿಶೇಷ ಅತಿಥಿಗಳಾಗಿದ್ದ ಐಸಿಐಸಿಐ ಬ್ಯಾಂಕ್ನ ಶಿರಸಿ ಶಾಖೆಯ ವ್ಯವಸ್ಥಾಪಕರಾದ ಪ್ರವೀಣಕುಮಾರ ಚಿಕ್ಕಮಠ ಮಾತನಾಡಿ, ರಾಷ್ಟçಮಟ್ಟದ ಬ್ಯಾಂಕಿಂಗ್ ಕ್ಷೇತ್ರದ ತಂತ್ರಜ್ಞಾನದಲ್ಲಿ ಐಸಿಐಸಿಐ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದರು.
ಟಿಆರ್ಸಿ ಇ-ಕಲೆಕ್ಷನ್ ಸೇವೆಯ ವಿಶೇಷತೆ:
ಪೋನ್ ಪೇ, ಗೂಗಲ್ ಪೇ, ಪೇಟಿಎಂನಂತಹ ಯುಪಿಐ ಆ್ಯಪ್ಗಳ ಮೂಲಕ ನೇರವಾಗಿ ಟಿಆರ್ಸಿಯಲ್ಲಿ ರೈತರು ಹೊಂದಿದ ಖಾತೆಗೆ ಹಣ ಜಮಾವಣೆ ಮಾಡಬಹುದಾದ ಆಧುನಿಕ ವ್ಯವಸ್ಥೆ ಇದಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕವೂ ಸಹ ನೇರವಾಗಿ ಟಿಆರ್ಸಿಯಲ್ಲಿ ರೈತರು ಹೊಂದಿದ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಿರುವುದಲ್ಲದೆ ಜಮಾ ಮಾಡಿದ ಹಣಕ್ಕೆ ಸಂಬಂಧಿಸಿ ಸದಸ್ಯರು ವಿಶೇಷ ಸೂಚನೆಯನ್ನು ಸಹ ನಮೂದಿಸಬಹುದಾಗಿದೆ.
ಇ-ಕಲೆಕ್ಷನ್ ಚಾಲನೆ ನೀಡುವ ಸಂದರ್ಭದಲ್ಲಿ ಟಿಆರ್ಸಿ ಉಪಾಧ್ಯಕ್ಷರಾದ ವಿಶ್ವಾಸ ಪಿ. ಬಲ್ಸೆ ಚವತ್ತಿ ಗೌರವ ಉಪಸ್ಥಿತಿ ಹೊಂದಿದ್ದರು. ವಿಶೇಷ ಅತಿಥಿಗಳಾಗಿ ಐಸಿಐಸಿಐ ಬ್ಯಾಂಕ್ನ ಆರ್.ಎಂ. ಲಕ್ಷ್ಮಣ ಎಸ್. ಹಾಗೂ ಐಸಿಐಸಿಐ ಬ್ಯಾಂಕ್ನ ತಾಂತ್ರಿಕ ವಿಭಾಗದ ವಿಜಯಕುಮಾರ ಮತ್ತು ಸಚಿನ್ ಶೇಟ್ ಆಗಮಿಸಿದ್ದರು.
ಟಿಆರ್ಸಿ ಆಡಳಿತ ಮಂಡಳಿ ಎಲ್ಲ ನಿರ್ದೇಶಕರು ಹಾಗೂ ಸಿಬ್ಬಂದಿ ಇದ್ದರು.
ಕೋಟ್:
ನಮ್ಮ ಸಂಘವು ಸದಸ್ಯ ಸ್ನೇಹಿ ಅನೇಕ ಸೌಲಭ್ಯಗಳನ್ನು ನೀಡುತ್ತಲೇ ಬಂದಿದೆ. ಆಧುನಿಕತೆಗೆ ತಕ್ಕಂತೆ ಸದಸ್ಯರಿಗೆ ಸೇವೆ ನೀಡುವುದು ನಮ್ಮ ಕರ್ತವ್ಯ ಸಹ ಆಗಿದೆ. ಸಂಘದ ಸಂಪೂರ್ಣ ಕಾರ್ಯವ್ಯವಹಾರ ಗಣಕೀಕರಣಗೊಂಡಿದ್ದು ಸದಸ್ಯರು ತಮ್ಮ ವ್ಯವಹಾರದ ಸಂಪೂರ್ಣ ವಿವರವನ್ನು ತಮ್ಮ ಮೊಬೈಲ್ನಲ್ಲಿಯ ಪಡೆದುಕೊಳ್ಳುವಂತಹ ಸೌಲಭ್ಯವನ್ನು ಒದಗಿಸಲಾಗಿದೆ. ಈಗ ಇ-ಕಲೆಕ್ಷನ್ ಸೇವೆ ನೀಡುತ್ತಿರುವ ಮೊದಲ ಸಂಘ ನಮ್ಮದಾಗಿರುವುದು ಸಂತಸ ತಂದಿದೆ. ನಮ್ಮ ಸದಸ್ಯರು ಸಂಘದ ಸೌಲಭ್ಯಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳುತ್ತಿರುವುದರಿಂದ ಹೊಸ ಹೊಸ ಸೇವೆಯನ್ನು ಒದಗಿಸಲು ನಮಗೆ ಉತ್ಸಾಹ ಹೆಚ್ಚುತ್ತಲೇ ಇದೆ.
- ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಅಧ್ಯಕ್ಷರು, ಟಿಆರ್ಸಿ