ಶಿರಸಿ: ತಾಲೂಕಿನ ಸಾಲ್ಕಣಿ ಗ್ರಾಮದ ಬಿಜೆಪಿ ಕಾರ್ಯಕರ್ತ ನಾಗರಾಜ ಮುತ್ತ ಪೂಜಾರಿ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ನಗದು ಹಣ ಹಾಗೂ ಇತರೆ ವಸ್ತು ಸಂಪೂರ್ಣ ಸುಟ್ಟು ಹೋದ ಘಟನೆ ನಡೆದಿದ್ದು, ಸುಮಾರು ರೂ. 4 ಲಕ್ಷಕ್ಕೂ ಅಧಿಕ ಹಾನಿಯಾಗಿದ್ದು, ಸಂಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಬಿಜೆಪಿ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಆರ್ಥಿಕ ಸಹಾಯ ಮಾಡುವುದರ ಮೂಲಕ ಕುಟುಂಬದ ಬೆನ್ನಿಗೆ ನಿಲ್ಲುವ ಕೆಲಸ ಮಾಡಿದ್ದಾರೆ.
ಶುಕ್ರವಾರ ಸ್ಥಳೀಯ ಕಾರ್ಯಕರ್ತರೊಂದಿಗೆ ಬೆಂಕಿ ಅವಘಡಕ್ಕೆ ಈಡಾದ ಕಾರ್ಯಕರ್ತನ ಮನೆಗೆ ತೆರಳಿ, ಪರಿಸ್ಥಿತಿ ಅವಲೋಕಿಸಿದ ಅವರು, ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿ ಮನೆ ಕಟ್ಟಲು ಆರ್ಥಿಕ ನೆರವು ನೀಡುವ ಬಗ್ಗೆ ಚರ್ಚಿಸಿದ್ದರ ಜೊತೆಗೆ ಇಂತಹ ಕಷ್ಟದ ಸಂದರ್ಭದಲ್ಲಿ ನಾವೆಲ್ಲರೂ ಅವರ ಜೊತೆಗೆ ಇದ್ದು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅನುಸೂಯಾ ಹೆಗಡೆ ಹಾಗೂ ರವಿರಾಜ್ ಇನ್ನಿತರರು ಉಪಸ್ಥಿತರಿದ್ದರು.
ನಾಗರಾಜ್ ಪೂಜಾರಿ ಅವರು ಮನೆ ಕಟ್ಟಲು ತಂದು ಇಟ್ಟಿದ್ದ ಸುಮಾರು1.5 ಲಕ್ಷ ನಗದು ಹಣ ಹಾಗೂ ಎಲೆಕ್ಟ್ರಿಕಲ್ ಕೆಲಸ ಮಾಡುವವರಾಗಿದ್ದರಿಂದ ಮನೆಯಲ್ಲಿ ಇಟ್ಟಿದ ಸಾಕಷ್ಟು ವೈಯರ್ ಬಂಡಲ್ ಹಾಗೂ ಮನೆಯ ಇತರೆ ಸಾಮಗ್ರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಮೊದಲೇ ಬಾಡಿಗೆ ಮನೆಯಲ್ಲಿ ಇದ್ದು ಈಗ ಇರುವ ಬಾಡಿಗೆ ಮನೆಯು ಕೂಡ ಕಳೆದುಕೊಂಡ ಇನ್ನಷ್ಟು ಕಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ.