ಶಿರಸಿ: ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ನಗರದ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬುಧವಾರ ಪುರಸ್ಕರಿಸಲಾಯಿತು.
ಭರತನಾಟ್ಯ, ಸಂಸ್ಕೃತ, ಹಿಂದಿ, ಕನ್ನಡ ಭಾಷಣ, ಜನಪದಗೀತೆ, ಚಿತ್ರಕಲೆ, ಮಿಮಿಕ್ರಿ, ಕವನವಾಚನ, ಕವ್ವಾಲಿ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಉಪನಿರ್ದೇಶಕ ಪಿ.ಬಸವರಾಜ ಅವರು ಪುರಸ್ಕರಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಬಹುಮಾನ ಪಡೆದ ಜಿಲ್ಲೆಯಾಗಿದೆ. ಪ್ರತಿವರ್ಷ ಇಲಾಖೆಯಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿದ್ದು ಈ ಮೂಲಕ ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡುತ್ತಿದ್ದೇವೆ. ಪ್ರತಿಭಾ ಕಾರಂಜಿ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡುವುದಾಗಿದೆ ಎಂದರು.
ಪ್ರತಿಭಾ ಕಾರಂಜಿ 2020ರಿಂದ ಆರಂಭವಾಗಿದ್ದು 24ವರ್ಷದ ಇತಿಹಾಸವಿದೆ. ಇದರ ಮೂಲಕ ಸಾಕಷ್ಟು ಕಲಾವಿದರು ಸೃಷ್ಟಿಯಾಗುವಂತಾಗಿದೆ ಎಂದರು.
ವಿಷಯ ಪರೀವಿಕ್ಷಕ ಎಂ.ಕೆ.ಮೊಗೇರ ಮಾತನಾಡಿ, ಶಿರಸಿ ಶೈಕ್ಷಣಿಕ ಜಿಲ್ಲೆಯಿಂದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ 32ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅದರಲ್ಲಿ ವಯಕ್ತಿಕ ಹಾಗೂ ಗುಂಪು ಸ್ಪರ್ಧೆ ಸೇರಿ 14ವಿದ್ಯಾರ್ಥಿಗಳು ಒಟ್ಟು 10ಬಹುಮಾನ ಪಡೆದಿದ್ದಾರೆ ಎಂದರು.
ಅಧಿಕಾರಿಗಳಾದ ಡಿ.ಎಚ್.ನಾಯ್ಕ, ಎನ್.ಶ್ರೀಮತಿ, ಜಿ.ಆರ್.ಹೆಗಡೆ, ಕುಮಾರ ಭಟ್ಟ, ಎಂ.ಎಂ.ಹೆಗಡೆ, ಪ್ರತಿಭಾ ನಿಲೇಕಣಿ, ಬಸವರಾಜ ಮುಂತಾದವರು ಹಾಜರಿದ್ದರು.