ಬನವಾಸಿ: ಜನಸಾಮಾನ್ಯರಿಗೆ ಮೂಲಭೂತವಾದಂತಹ ಆರೋಗ್ಯ ಸೇವೆಗಳನ್ನು ನೀಡುವುದೇ ಪ್ರಾಥಮಿಕ ಆರೋಗ್ಯ ಸೇವೆಯಾಗಿದೆ. ಆರೋಗ್ಯಕರ ಜೀವನ ಶೈಲಿಯು ನಮ್ಮನ್ನು ಸದಾ ಸದೃಢವಾಗಿ, ಶಕ್ತಿಯುತವಾಗಿ ಹಾಗೂ ಆರೋಗ್ಯವಾಗಿರಿಸುತ್ತದೆ ಎಂದು ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯಶ್ರೀ ಹೆಗಡೆ ಹೇಳಿದರು.
ಅವರು ಸಮೀಪದ ಕಂತ್ರಾಜಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ರಾಣಿ ಚೆನ್ನಮ್ಮ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ಹಮ್ಮಿಕೊಂಡ ಆರೋಗ್ಯ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಆರೋಗ್ಯದ ಬಗ್ಗೆ ಮಾಹಿತಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಪರಿಸರ ಮತ್ತು ವೈಯುಕ್ತಿಕ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಪೌಷ್ಠಿಕ ಆಹಾರ ಮಂಗನ ಕಾಯಿಲೆ, ಸಣ್ಣಪುಟ್ಟ ರೋಗ-ರುಜಿನಗಳಿಗೆ ಚಿಕಿತ್ಸೆಗಳು, ಕುಟುಂಬ ಕಲ್ಯಾಣ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಸುಧೀರ ನಾಯರ್, ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ ಅಕ್ಕಿವಳ್ಳಿ, ಯೋಜನೆಯ ವಿಚಕ್ಷಣಾಧಿಕಾರಿ ಪದ್ಮಾವತಿ ಮಾತನಾಡಿದರು.
ರಾಣಿ ಚೆನ್ನಮ್ಮ ಮಹಿಳಾ ಜ್ಞಾನ ವಿಕಾಸದ ಕೇಂದ್ರದ ಸದಸ್ಯರಾದ ನಿರ್ಮಲಾ ನಿರೂಪಿಸಿದರು. ಸೇವಾ ಪ್ರತಿನಿಧಿ ಶಿವಾಜಿ ನಾಯ್ಕ್ ಸ್ವಾಗತಿಸಿದರು. ಸದಸ್ಯೆ ಸವಿತಾ ವಂದಿಸಿದರು.