ಶಿರಸಿ: ನಾಟ್ಯಶಾಸ್ತ್ರದ ಬೆಳಕಿನಲ್ಲಿ ಯಕ್ಷಗಾನದ ಪುನರ್ವ್ಯಾಖ್ಯಾನದ ಅವಶ್ಯಕತೆಯನ್ನು ಕಂಡುಕೊಳ್ಳಲು ಕಳೆದ ಹನ್ನೆರಡು ವರ್ಷಗಳಿಂದ ಅಧ್ಯಯನ ನಡೆಸಿದ ವಿಶ್ರಾಂತ ಸಂಪಾದಕ, ಸಾಹಿತಿ ಅಶೋಕ ಹಾಸ್ಯಗಾರ ಅವರ ‘ದಶರೂಪಕಗಳ ದಶಾವತಾರ’ ಎಂಬ ಸಂಶೋಧನಾ ಗ್ರಂಥದ ಲೋಕಾರ್ಪಣಾ ಸಮಾರಂಭವು ಜನವರಿ 21 ಮಂಗಳವಾರ ಇಳಿಹೊತ್ತು 4 ಗಂಟೆಗೆ ನಗರದ ರಂಗಧಾಮದಲ್ಲಿ ಜರುಗಲಿದೆ.
ನಾಮಾಂಕಿತ ವಿಮರ್ಶಕ, ಮೀಮಾಂಸಕಾರ ಬೆಂಗಳೂರಿನ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಬೆಂಗಳೂರು ಗ್ರಂಥ ಬಿಡುಗಡೆಗೊಳಿಸಿ ಮಾತನಾಡಲಿದ್ದಾರೆ. ಅಭ್ಯಾಗತರಾಗಿ ವಿದ್ಯಾವಾಚಸ್ಪತಿ ವಿ.ಉಮಾಕಾಂತ ಭಟ್ ಕೆರೆಕೈ ಕೃತಿಯಲ್ಲಿನ ಶಾಸ್ತ್ರೀಯ ನಿರ್ವಚನ ಮತ್ತು ಅನ್ವಿತಿಯ ಕುರಿತು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಲ್.ಹೆಗಡೆ ಗ್ರಂಥದಲ್ಲಿ ಪ್ರಸ್ತಾಪಿಸಿದ ಯಕ್ಷಗಾನದ ಶಾಸ್ತ್ರೀಯ ಪ್ರಯೋಗದ ಹಿನ್ನೆಲೆಯಲ್ಲಿ ಭಾಷಣ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತಾವನೆಯಲ್ಲಿ ಗ್ರಂಥಕರ್ತ ಅಶೋಕ ಹಾಸ್ಯಗಾರ ಸಂಶೋಧನೆಗೆ ಪ್ರೇರಣೆಯಾದ ಮತ್ತು ಎದುರಾದ ಸವಾಲುಗಳನ್ನು ನೆನಪಿಸಿಕೊಳ್ಳಲಿದ್ದಾರೆ. ಆರಂಭದಲ್ಲಿ ಗಣಪತಿ ಕಿರೀಟ ಪೂಜೆ ಮತ್ತು ತೆರೆ ಕುಣಿತದ ಮೂಲಕ ಗ್ರಂಥ ಪ್ರವೇಶ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.