ಕುಮಟಾ: ತಾಲೂಕಿನ ಮಿರ್ಜಾನಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಸೆಂಟ್ರಲ್ ಸ್ಕೂಲ್‌ನಲ್ಲಿ ಜ. 18ರಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪದ್ಮಭೂಷಣ ಪುರಸ್ಕೃತ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾದರನಾಥ ಮಹಾಸ್ವಾಮೀಜಿಯವರ 80ನೇ ಜಯಂತ್ಯೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪುರೋಹಿತರಾದ ದತ್ತಾತ್ರೇಯ ಭಟ್ ಪರಮಪೂಜ್ಯ ಯುಗಯೋಗಿ ಪದ್ಮಭೂಷಣ ಪುರಸ್ಕೃತ ಭೈರವೈಕ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾದರನಾಥ ಮಹಾಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜಿಸಿ, ನೈವೇದ್ಯ ಸಮರ್ಪಿಸಿ, ಶ್ಲೋಕ ಪಠನೆಯೊಂದಿಗೆ ಮಹಾಮಂಗಳಾರತಿ ಮಾಡಿದರು. ವಿದ್ಯಾರ್ಥಿಗಳು ಗುರುಪಾದುಕಾಷ್ಷಕಂ ಪಠಿಸಿ, ಗುರುಗಳ ಭಜನೆ ಮಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ವೇದಘೋಷ ಪಠಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಮಂಜುನಾಥ ಭಟ್ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜ್ಯರ ಮಹತ್ತರವಾದ ಸಾಧನೆಗಳ ಬಗ್ಗೆ ಮತ್ತು ಗೀತಾ ಜಯಂತಿಯ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಲ್ಲಾಪುರ ಗುರುಪ್ರಸಾದ ಪ್ರೌಢಶಾಲೆಯ ನಿವೃತ್ತ ಮುಖ್ಯಾಧ್ಯಾಪಕರು ಮತ್ತು ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಶೈಕ್ಷಣಿಕ ನಿರ್ದೇಶಕರಾದ ಎಂ. ಟಿ. ಗೌಡ, ಮಹಾಸ್ವಾಮೀಜಿಯವರ ಬಾಲ್ಯ, ಶಿಕ್ಷಣ ಮತ್ತು ಸಾಧನೆಗಳ ಬಗ್ಗೆ ಮತ್ತು ಕೃಷ್ಣನು ಅರ್ಜುನನಿಗೆ ಉಪದೇಶಿಸಿದ ಭಗವದ್ಗೀತೆಯ ಮಹತ್ವ ಮತ್ತು ಸನಾತನ ಧರ್ಮದ ಶ್ರೇಷ್ಠತೆ, ಪಾವಿತ್ರ್ಯತೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಅರ್ಚನಾ ಭಟ್, ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ರೇಷ್ಮಾ ಬಾಡ್ಕರ್, ಹಿರಿಯ ಶಿಕ್ಷಕರಾದ ಎಂ.ಜಿ. ಹಿರೇಕುಡಿ, ಶ್ರೀಮತಿ ಲೀನಾ ಎಂ. ಗೊನೇಹಳ್ಳಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಸಮಸ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಿ ಪುನೀತರಾದರು.
ಗೀತಾ ಜಯಂತಿಯ ಪ್ರಯುಕ್ತ ಆಯೋಜಿಸಲಾದ ಭಗವದ್ಗೀತೆ ಕಂಠಪಾಠ ಸ್ಪರ್ಧೆ ಮತ್ತು ಭಗವದ್ಗೀತೆಗೆ ಸಂಬಂಧಿಸಿದ ಲಿಖಿತ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಸಂಪೂರ್ಣ ಕಾಯ್ರಕ್ರಮವನ್ನು ದೇವಭಾಷೆಯಾದ ಸಂಸ್ಕೃತದಲ್ಲಿ ಕುಮಾರಿ ಪೃಥ್ವಿ ಪ್ರಭು ನಿರೂಪಿಸಿದಳು. ಕುಮಾರಿ ಲಿಖಿತಾ ಸ್ವಾಗತಿಸಿದಳು. ಕುಮಾರಿ ಮಾನ್ಯ ವಂದಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು.