ಶಿರಸಿ: ಇಲ್ಲಿನ ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಿರಸಿಯ ಹಿರಿಯ ನ್ಯಾಯವಾದಿ ರಾಮಾ ಜೋಶಿ, ಹಿರಿಯ ನಾಗರಿಕರ ಯೋಗಕ್ಷೇಮ ಅಧಿನಿಯಮ 2007 ಒಂದು ಉತ್ತಮ ಕಾನೂನಾಗಿದ್ದು, ಸಂವಿಧಾನದಲ್ಲಿ ಹಿರಿಯ ನಾಗರಿಕರಿಗೆ ಗೌರವಯುತವಾಗಿ ಬಾಳಲು ಸೌಲಭ್ಯ ಕಲ್ಪಿಸಬೇಕೆಂಬ ನಿರ್ದೇಶನ ನೀಡಿದ್ದರ ಭಾಗವಾಗಿದೆ. ಈ ಕಾನೂನು ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ತ್ವರಿತವಾಗಿ ನ್ಯಾಯ ನಿರ್ಣಯ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು. ಅನೇಕ ಸಂದರ್ಭಗಳಲ್ಲಿ ತಂದೆ, ತಾಯಿ- ಮಕ್ಕಳಲ್ಲಿ ಅಭಿಪ್ರಾಯ ಭೇದಗಳು ಬರುತ್ತಿದ್ದು ಅಂತಹ ಸಂದರ್ಭದಲ್ಲಿ ಪರಸ್ಪರ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಬಗೆಹರಿಸಬೇಕೆಂದು ಹೇಳಿ, ಕಾಡಿ ಪಡೆಯುವುದಕ್ಕಿಂತ ಕೂಡಿ ಪಡೆಯುವುದು ಉತ್ತಮ ಎಂಬುದು ಹೆಚ್ಚು ಪ್ರಸ್ತುತವಾಗಬೇಕೆಂದು ಮಾರ್ಮಿಕವಾಗಿ ನುಡಿದರು.
ಅಲ್ಲದೆ ತಮ್ಮ ಸುಧೀರ್ಘ 45 ವರ್ಷಗಳ ವೃತ್ತಿಯ ಹಲವು ಸಂದರ್ಭಗಳನ್ನು ಉಲ್ಲೇಖಿಸಿ ಹಿರಿಯ ನಾಗರಿಕರು ಹೇಗೆ ಪ್ರಯೋಜನ ಪಡೆದು ಬಾಳನ್ನು ಸುಂದರಮಯವಾಗಿ ಮಾಡಿಕೊಳ್ಳಬಹುದು ಎಂದು ಹೇಳಿದರು. ಸಭಿಕರ ಅನೇಕ ಪ್ರಶ್ನೆಗಳಿಗೆ ಈ ಸಂದರ್ಭದಲ್ಲಿ ಉತ್ತರಿಸಿದರು.
ಇದಕ್ಕೂ ಮೊದಲು ಹಿರಿಯ ನಾಗರೀಕರ ಯೋಗ ಕ್ಷೇಮ ಅಧಿನಿಯಮ ಕುರಿತು ವಕೀಲೆ ಸರಸ್ವತಿ ಹೆಗಡೆ,, ಈ ಕಾನೂನಿನಡಿ ಕುಟುಂಬ ಅಂದರೆ ಏನು?, ಕುಟುಂಬದಲ್ಲಿ ಯಾರು ಯಾರು ಒಳಗೊಂಡಿರುತ್ತಾರೆ, ಜೀವನಾಂಶ ಕೇಳುವದು, ಪಡೆಯುವುದು ಹೇಗೆ?; ನ್ಯಾಯಾಧಿಕರಣದಲ್ಲಿ ಭಿನ್ನವಿಸಿ ಪರಿಹಾರ ಹೇಗೆ ಪಡೆಯುವುದು? ಮೇಲ್ಮನವಿ ಹೇಗೆ ಸಲ್ಲಿಸುವುದು? ಆದೇಶದನ್ವಯ ಜೀವನಾಂಶ ವಸೂಲಿ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಎಲ್ಲಾ ವಿಷಯಗಳನ್ನು ವಿಸ್ತೃತವಾಗಿ ತಿಳಿಸಿಕೊಟ್ಟರು. ಅಲ್ಲದೆ ತಮ್ಮ ವೃತ್ತಿಯ ಅನುಭವದಲ್ಲಿ ಘಟಿಸಿದ ಅನೇಕ ರೋಚಕ ಸಮಸ್ಯೆಗಳನ್ನು ತಿಳಿಸಿ, ಅದಕ್ಕೆ ಸೂಚಿಸಿದ ಪರಿಹಾರ, ಅಂತಹ ದಂಪತಿಗಳು ಈಗ ಹೇಗೆ ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂಬುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿ ಕಾನೂನು ವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ್ ಭಟ್ಕಳ್, ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿ ಎಂದು ಹೇಳಿ, ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿ, ಸಂಘಟಕರನ್ನು ಶ್ಲಾಘಿಸಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಶಿರಸಿ ವಕೀಲರ ಪರಿಷತ್ತಿನ ಅಧ್ಯಕ್ಷ ಸಿಎಫ್ ಈರೇಶ್, ಕಾನೂನು ಅರಿವು ಎಷ್ಟು ಅಗತ್ಯ ಎಂಬುದನ್ನು ತಿಳಿಸಿ, ವಕೀಲರ ಪರಿಷತ್ತು ಇಂತಹ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು. ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಸಂಘಟಕರನ್ನು ಅಭಿನಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕೆಪಿಟಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಮತಿ ಸಂಧ್ಯಾ ಭಂಡಾರಿ ಹಾಗೂ ಅವರ ಮಕ್ಕಳು ನಡೆಸಿಕೊಟ್ಟ ಭಗವದ್ಗೀತೆ ಪಠಣ ಹಾಗೂ ಯಕ್ಷಗಾನ ಶೈಲಿಯ ಗಣಪತಿ ಸ್ತುತಿ ಎಲ್ಲರ ಮೆಚ್ಚುಗೆ ಗಳಿಸಿತು. ಇವರನ್ನು ಗಣ್ಯರು ಗೌರವಿಸಿದರು.
ಬಳಗದ ಎಂ.ಎಸ್.ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾರಾಯಣ ಪುರಾಣಿಕ್ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಇಂದಿರಾ ಬೈಲಕೇರಿ, ಡಿ.ಎಸ್. ಹೆಗಡೆ ಕಲಾವಿದರು ಹಾಗೂ ವೇದಿಕೆ ಮೇಲಿದ್ದ ಗಣ್ಯರನ್ನು ಪರಿಚಯಿಸಿದರು. ಜಯಪ್ರಕಾಶ್ ಹಬ್ಬು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿದರು. ವಿ.ಜಿ. ಗಾಯತ್ರಿ ವಂದಿಸಿ, ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಡಿ.ಎ. ಹೆಗಡೆ, ಕೃಷ್ಣಮೂರ್ತಿ ಭಟ್, ಲಕ್ಷ್ಮಣ ಶಾನಭಾಗ, ದಾಮೋದರ ಭಂಡಾರಿ, ತ್ರಿವೇಣಿ ಹೆಗಡೆ, ಕೃಷ್ಣವೇಣಿ ಹೆಗಡೆ, ಭಾರತಿ ಹತ್ವಾರ, ಎಸ್.ಎಸ್. ಹೆಗಡೆ, ಆರ್.ಆರ್. ಹೆಗಡೆ, ಪಿ.ಆರ್. ಹೆಗಡೆ, ಆರ್.ಎಸ್. ಹೆಗಡೆ, ಆರ್.ಕೆ.ಹೆಗಡೆ, ಜಿ.ಜಿ.ದೇಸಾಯಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.