ಶಿಷ್ಯವೇತನ ಪರೀಕ್ಷೆ ಬರೆದ 497 ಮಕ್ಕಳು : ರಾಷ್ಟ್ರೀಯ ಯುವದಿನ ಆಚರಣೆ
ಕುಮಟಾ : ಭಾರತೀಯ ಸಂಸ್ಕೃತಿಯನ್ನು ಉಳಿಸುವ, ಸಂಸ್ಕಾರಯುತ ಶಿಕ್ಷಣದ ಮೂಲಕ ಜನಮನ್ನಣೆ ಗಳಿಸುವ ಜೊತೆಗೆ ಈಗಾಗಲೇ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಧಾತ್ರಿ ಅಕಾಡೆಮಿ ಮಂಗಳೂರಿನ ಸಹಭಾಗಿತ್ವದೊಂದಿಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನಲ್ಲಿ ೧೦ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಶಿಷ್ಯವೇತನ ನೀಡುವ ಹಿನ್ನೆಲೆಯಲ್ಲಿ “ಪ್ರತಿಭಾ ಸ್ಪಂದನ” ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಈ ಪರೀಕ್ಷೆಗೆ ಜಿಲ್ಲೆಯ 497 ವಿದ್ಯಾರ್ಥಿಗಳು ಪರೀಕ್ಷಾ ಬರೆಯುವ ಮೂಲಕ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಸಮರ್ಥರಾಗಿದ್ದು, ಕಲಿಯುವ ಉತ್ಕಟ ಇಚ್ಛೆ ಹೊಂದಿರುವ ಆರ್ಥಿಕವಾಗಿ ಸಬಲರಲ್ಲದ ೧೦ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ವಿಧಾತ್ರಿ ಅಕಾಡೆಮಿ ಯೋಜನೆ ರೂಪಿಸಿದೆ. ಶೈಕ್ಷಣಿಕವಾಗಿ ಸಾಧನೆ ಮಾಡಿದ 6 ವಿದ್ಯಾರ್ಥಿಗಳು ಹಾಗೂ ಸಾಂಸ್ಕೃತಿಕ ಸಾಧನೆ ಮಾಡಿದ ೨ ಕ್ರೀಡಾ ಸಾಧಕರು ೨ ಹೀಗೆ ೧೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಜೊತೆಯಲ್ಲಿ ಪ್ರತಿಭಾವಂತ ಅರ್ಹ ಮೊದಲ ೧೫ ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ನಿರ್ಭಂಧವಿಲ್ಲದಂತೆ, ಅವರ ಪರೀಕ್ಷಾ ಫಲಿತಾಂಶ ಆಧರಿಸಿ ವಿವಿಧ ಹಂತದ ಶಿಷ್ಯವೇತನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಗಣಿತ ಹಾಗೂ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಯಿತು. 50 ಅಂಕ ಬಹು ಆಯ್ಕೆ ಹಾಗೂ 50 ಅಂಕದ ವಿಸ್ತೃತ ಪ್ರಶ್ನೆ ಪತ್ರಿಕೆಗೆ ಮಕ್ಕಳು ಉತ್ತರಿಸಿದರು. ಇನ್ನು ಪರೀಕ್ಷಾ ಪೂರ್ವ ನಡೆದ ರಾಷ್ಟ್ರೀಯ ಯುವದಿನದ ಕಾರ್ಯಕ್ರಮ ಉದ್ಘಾಟಿಸಿದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಹಿರಿಯ ವಿಶ್ವಸ್ಥ ರಮೇಶ ಪ್ರಭು, ಒಂದು ದೇಶವು ಅಭಿವೃದ್ಧಿಯತ್ತ ಸಾಗುವಲ್ಲಿ ಆ ದೇಶದ ಯುವ ಶಕ್ತಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂತಹ ಯುವ ಸಮೂಹದ ಶಕ್ತಿ, ಸಾಮರ್ಥ್ಯದ ಬಗ್ಗೆ ವಿಶ್ವಕ್ಕೆ ಸಾರಿ ಹೇಳಿದವರಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರು. ದೇಶದ ಅಭಿವೃದ್ಧಿಯು ಯುವಕರಿಂದ ಮಾತ್ರ ಸಾಧ್ಯ ಎಂದು ನಂಬಿದ್ದ ವಿವೇಕಾನಂದರು ತಮ್ಮ ಆಲೋಚನೆಗಳು ಮತ್ತು ಚಿಂತನೆಗಳೊಂದಿಗೆ ಯುವಕರನ್ನು ಒಗ್ಗೂಡಿಸಲು ಬಯಸಿದವರು. ಈ ಮಹಾನ್ ವ್ಯಕ್ತಿಯ ಹಾಗೂ ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆಯಾಗಿರುವ ವಿವೇಕಾನಂದರ ಬಗ್ಗೆ ಅರಿಯಬೇಕು ಎಂದರು.
ಪ್ರಾಂಶುಪಾಲ ಕಿರಣ ಭಟ್ಟ ಸ್ವಾಗತಿಸಿದರು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪರೀಕ್ಷೆಯನ್ನು ಯಾವ ಕಾರಣಕ್ಕೆ ಹಮ್ಮಿಕೊಳ್ಳಲಾಗಿದೆ ಯಾವ ರೀತಿ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳಲಾಗುತ್ತಿದೆ ಎಂಬ ಬಗ್ಗೆ ವಿವರಿಸಿದರು. ಉಪನ್ಯಾಸಕ ಪ್ರಸನ್ನ ಹೆಗಡೆ ಪರೀಕ್ಷಾ ರೀತಿ ನೀತಿಗಳ ಬಗೆಗೆ ಮಾಹಿತಿ ನೀಡಿದರು. ಮುಖ್ಯೋಪಾಧ್ಯಾಯ ಗಣೇಶ ಜೋಶಿ ನಿರೂಪಿಸಿದರು. ಉಪನ್ಯಾಸಕ ಚಿದಾನಂದ ಭಂಡಾರಿ ಸರ್ವರನ್ನೂ ವಂದಿಸಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಅಂಗಸಂಸ್ಥೆಗಳ ಶಿಕ್ಷಕರು ಶಿಸ್ತುಬದ್ಧವಾಗಿ ಪರೀಕ್ಷೆ ನಡೆಸಲು ಸಹಕರಿಸಿದರು.