ಸಿದ್ದಾಪುರ:
ದಡ್ಡರನ್ನು ಬುದ್ಧಿವಂತರನ್ನಾಗಿಸುವ ಮತ್ತು ಸಾವನ್ನು ಮುಂದೂಡುವ ಶಕ್ತಿ ಇರುವದು ಸಾಹಿತ್ಯಕ್ಕೆ. ಅದಕ್ಕೆ ಸೋಲೆಂಬುದು ಇಲ್ಲ ಎಂದು ಸಾಹಿತಿ ಡಾ| ಸರ್ಪ್ರಾಜ್ ಚಂದ್ರಗುತ್ತಿ ಹೇಳಿದರು.
ಅವರು ಪಟ್ಟಣದ ಶಂಕರಮಠದಲ್ಲಿ ಜರುಗಿದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಮಾತುಗಳನ್ನಾಡಿ ಸಂಸ್ಕೃತಿ, ಕಲೆ ಈ ನೆಲದಲ್ಲಿ ಸಾಮರಸ್ಯವನ್ನು ಮೂಡಿಸುವ ಕೆಲಸವಾಗುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ಹೆಸರುಗಳಲ್ಲಿ ಸಿದ್ದಾಪುರವೂ ಒಂದು. ಇಂದು ನಡೆದ ಗೋಷ್ಠಿಗಳೆಲ್ಲ ಉತ್ತಮವಾಗಿ ನಡೆದಿವೆ. ಇದೊಂದು ಗುಣಮಟ್ಟದ ಯಶಸ್ವಿ ಸಮ್ಮೇಳನ ಎಂದರು.
ಗೌರವ ಪುರಸ್ಕೃತ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಸಾಹಿತಿ,ಪತ್ರಕರ್ತ ಗಂಗಾಧರ ಕೊಳಗಿ ಸಮಾಜದ ಬೇರೆ ಬೇರೆ ನೆಲೆಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಪುರಸ್ಕರಿಸಲಾಗಿದ್ದು ಕೃಷಿ, ಜೇನು ಕೃಷಿ, ಸಂಗೀತ, ಯಕ್ಷಗಾನ, ಮೂಡಲಪಾಯ, ಹಸೆಚಿತ್ತಾರ, ನಾಟಿ ವೈದ್ಯಕೀಯ ಮುಂತಾದ ಸಮಾಜದ ಒಳಗೆ ಯಾವುದೇ ಪ್ರಚಾರ, ಪ್ರಸಿದ್ಧಿಗಳ ಆಪೇಕ್ಷೆ ಇಲ್ಲದೇ ತಮ್ಮಪಾಡಿಗೆ ಸಾಧನೆ ಮಾಡಿದವರನ್ನು ಗುರುತಿಸಿದ್ದು ಮತ್ತು ಶಿಕ್ಷಣ, ಸಾರಿಗೆ,ಚಿತ್ರಕಲೆ, ಮಾಧ್ಯಮ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು, ನಾವೆಲ್ಲ ನೆಮ್ಮದಿಯಾಗಿ ಬದುಕಲು ಕಾರಣವಾದ ದೇಶ ಕಾಯುವ ಸೈನಿಕರ ಪ್ರತಿನಿಧಿಯಾಗಿ ಯೋಧರೊರ್ವರನ್ನು ಪುರಸ್ಕರಿಸಿದ್ದು ಶ್ಲಾಘನೀಯ ಎಂದರು.
ಸಮ್ಮೇಳನಾಧ್ಯಕ್ಷ ಜಿ.ಜಿ.ಹೆಗಡೆ ಬಾಳಗೋಡ ಮಾತನಾಡಿ ಸಾಹಿತ್ಯದ ಓದು ಮನಸ್ಸನ್ನು ವಿಶಾಲವಾಗಿಸುತ್ತದೆ. ದಿನದ ಒಂದು ಗಂಟೆಯಾದರೂ ಓದಿಗೆ ಮೀಸಲಿಡಬೇಕು.ಮುಖ್ಯವಾಗಿ ಶಿಕ್ಷಕರು ತಮ್ಮ ಪಠ್ಯಗಳಿಗಷ್ಟೇ ಸೀಮಿತವಾಗದೇ ಇತರ ಕೃತಿಗಳನ್ನು ಅಧ್ಯಯನ ಮಾಡುವಂತಾಗಬೇಕು. ನಮ್ಮ ತಾಲೂಕಿನಲ್ಲಿದ್ದ ತಿಕಳಾರಿ ಭಾಷೆ ನಶಿಸಿಹೋಗಿದೆ. ರಸೌಷಧಿ ನೀಡುವ ವೈದ್ಯ ಪದ್ಧತಿ ನಿಧಾನವಾಗಿ ನಶಿಸುತ್ತಿದೆ. ಅವನ್ನು ಉಳಿಸಿಕೊಳ್ಳುವಲ್ಲಿ ನಾವೆಲ್ಲ ಮುಂದಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಆಶಾಕಿರಣ ಟ್ರಸ್ಟ ಅಧ್ಯಕ್ಷ ರವಿ ಹೆಗಡೆ ಹೂವಿನಮನೆ, ಲಯನ್ಸ ಕ್ಲಬ್ ಅಧ್ಯಕ್ಷ ಎ.ಜಿ.ನಾಯ್ಕ, ಹಿರಿಯ ಸಾಮಾಜಿಕ ಪ್ರಮುಖ ವಿ.ಎನ್.ನಾಯ್ಕ ಮಾತನಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಸಮಾರಂಭದಲ್ಲಿ ಎ.ಜಿ.ಶೇಖ್(ಸೈನಿಕಸೇವೆ), ಶಾಂತಾ ನಿಲೇಕಣಿ(ಸಂಗೀತ), ರೀಟಾ ಡಿಸೋಜ( ಶಿಕ್ಷಣ), ಸತೀಶ ದಂಟಕಲ್(ಯಕ್ಷಗಾನ), ವಿಶ್ವನಾಥ ಹೆಗಡೆ ನಿರಗಾರ( ನಾಟಿ ವೈದ್ಯ), ಎಸ್.ಜಿ.ಭಟ್ಟ (ಶಿಲ್ಪಕಲೆ), ನಾಗರಾಜ ಭಟ್ಟ ಕೆಕ್ಕಾರ(ಮಾಧ್ಯಮ), ಸಿ.ಕೆ.ಸತೀಶ(ಚಿತ್ರಕಲೆ), ಮೋಹನ ಗಣಪ ನಾಯ್ಕ(ಮೂಡಲಪಾಯ), ಡಿ.ಕೆ.ನಾಯ್ಕ ತೆಂಗಿನ್ಮನೆ( ಕೃಷಿ), ಮಹಾಬಲೇಶ್ವರ ನಾಯ್ಕ ಮನ್ಮನೆ(ಸಾರಿಗೆ), ಸರಸ್ವತಿ ಈಶ್ವರ ನಾಯ್ಕ ಹಸುವಂತೆ(ಹಸೆಚಿತ್ತಾರ) ಇವರುಗಳನ್ನು ಪುರಸ್ಕರಿಸಲಾಯಿತು. ಪುರಸ್ಕೃತರ ಪರವಾಗಿ ನಾಗರಾಜ ಭಟ್ಟ ಮಾತನಾಡಿದರು.
ಚಂದ್ರಶೇಖರ ಕುಂಬ್ರಿಗದ್ದೆ ಸ್ವಾಗತಿಸಿದರು. ಪ್ರಶಾಂತ ಹೆಗಡೆ ಭುವನಗಿರಿ ನಿರ್ಣಯಗಳನ್ನು ಮಂಡಿಸಿದರು. ನಾಗರಾಜ ಮಂಡಿವಾಳ ವಂದಿಸಿದರು. ನಾಗರಾಜ ಮಡಿವಾಳ, ಪೂರ್ಣಿಮಾ ಜನಕ ನಾಯ್ಕ ನಿರೂಪಿಸಿದರು.