ಜೋಯಿಡಾ : ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘ, ಕಾಳಿ ರೈತ ಉತ್ಪಾದಕ ಕಂಪನಿ, ಕುಂಬಾರವಾಡ, ಕಾಳಿ ಪರಿಸರ ಪ್ರವಾಸೋದ್ಯಮ ಸಂಸ್ಥೆ ಮತ್ತು ಗಡ್ಡೆಗೆಣಸು ಬೆಳಗಾರರ ಸಂಘ ಜೋಯಿಡಾ ಇವರ ಸಂಯುಕ್ತ ಆಶ್ರಯದಡಿ ಜನವರಿ 8ರಂದು ತಾಲೂಕು ಕೇಂದ್ರದಲ್ಲಿರುವ ಕುಣಬಿ ಭವನದಲ್ಲಿ 11ನೇ ವರ್ಷದ ಗಡ್ಡೆ ಗೆಣಸು ಮೇಳ ಮತ್ತು ಆಹಾರೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗಡ್ಡೆ ಗೆಣಸು ಬೆಳೆಗಾರರ ಸಂಘದ ನಿರ್ದೇಶಕರಾದ ಡಾ.ಜಯಾನಂದ ಡೇರೆಕರ ಹೇಳಿದರು.
ಅವರು ಸೋಮವಾರ ಜೋಯಿಡಾದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾಹಿತಿಯನ್ನು ನೀಡಿದರು. ಕುಣಬಿ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಬೆಳೆಯಾದ ಗಡ್ಡೆ ಗೆಣಸು ಮೊದಲಾದ ಆಹಾರ ವಸ್ತುಗಳ ಪ್ರದರ್ಶನ, ಮಾರಾಟ ಹಾಗೂ ಸ್ಪರ್ಧಾ ಕಾರ್ಯಕ್ರಮ ಮತ್ತು ಆಹಾರೋತ್ಸವ ಕಾರ್ಯಕ್ರಮವನ್ನು ಗಡ್ಡೆ ಗೆಣಸು ಮೇಳದಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮವನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜೋಯಿಡಾ ಗ್ರಾ.ಪಂ ಅಧ್ಯಕ್ಷೆ ಚಂದ್ರಿಮಾ ಮಿರಾಶಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ್ ಕಾಂದು, ಹಿರಿಯ ಕೃಷಿ ವಿಜ್ಞಾನಿ ಡಾ.ರೂಪಾ ಎಸ್.ಪಾಟೀಲ್ ಅವರು ಭಾಗವಹಿಸಲಿದ್ದಾರೆ. ವಿಶಿಷ್ಟ ವಿನೂತನ ರೀತಿಯಲ್ಲಿ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಕಾಳಿ ಪರಿಸರ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷರಾದ ವಿನಯ ದೇಸಾಯಿ, ಕಾರ್ಯದರ್ಶಿ ಸುದರ್ಶನ ಹೆಗಡೆ, ಕಾಳಿ ರೈತ ಉತ್ಪಾದಕ ಕಂಪನಿಯ ಶಾಂತರಾಮ ಕಾಮತ್, ಕಾಮತ್, ಕುಣಬಿ ಸಮಾಜ ಅಭಿವೃದ್ಧಿ ಸಂಘದ ಕಾರ್ಯದರ್ಶಿ ದಯಾನಂದ ಕುಮಗಾಳಕರ, ಗಡ್ಡೆಗೆಣಸು ಬೆಳಗಾರರ ಸಂಘದ ಅಧ್ಯಕ್ಷರಾದ ವಿಷ್ಣು ಡೇರೆಕರ ಮೊದಲಾದವರು ಉಪಸ್ಥಿತರಿದ್ದರು.