ಹೊನ್ನಾವರ: ಶಬರಿಮಲೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದ ಮಹೇಶ ಮಡಿವಾಳ ಎಂಬಾತ ಮನೆಗೆ ವಾಪಸ್ಸಾಗದೇ ಇರುವ ಘಟನೆ ನಡೆದಿದೆ.
ತಾಲೂಕಿನ ಕರ್ಕಿ, ತೆಂಗಿನಗೇರಿ ಬಳಿಯ ಮಹೇಶ ಮಡಿವಾಳ ಎಂಬಾತರು ವೆಲ್ಡಿಂಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. 8 ವರ್ಷದ ಹಿಂದೆ ಕುಂದಾಪುರದ ಶಾರದಾ ಎಂಬಾತರನ್ನು ವರಿಸಿದ್ದರು. ನಾಲ್ಕು ವರ್ಷದ ಹಿಂದೆ ಅವರು ತವರು ಮನೆಗೆ ಹೋದವರು ಮರಳಿ ಬರಲಿಲ್ಲ. ಇದರಿಂದ ಮಹೇಶ ಮಡಿವಾಳ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಅವರಿಗೆ ಹೊನ್ನಾವರದಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಪ್ರತಿ ವರ್ಷ ಶಬರಿಮಲೆಗೆ ಹೋಗಿ ಬಂದರೆ ಮಾತ್ರ ಅವರು ನಿರಾಳರಾಗಿರುತ್ತಿದ್ದರು.
ಅದರಂತೆ, ಡಿ 15ರಂದು ಶಬರಿಮಲೆಗೆ ಹೋಗಿ ಬರುವುದಾಗಿ ತಿಳಿಸಿ ಹೊರಟ ಅವರು, ಅಂದು ಬೆಳಗ್ಗೆ 10.30ಕ್ಕೆ ಕುಮಟಾದಿಂದ ರೈಲು ಹತ್ತಿದ್ದರು. ಡಿ 17ರಂದು ಫೋನ್ ಮಾಡಿ ಮರಳಿ ಹೊನ್ನಾವರಕ್ಕೆ ಬರುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಎರಡು-ಮೂರು ದಿನ ಕಳೆದರೂ ಅವರು ಮನೆಗೆ ಮರಳಲಿಲ್ಲ. ಹೀಗಾಗಿ ಕುಟುಂಬದವರೆಲ್ಲ ಸೇರಿ ರೈಲು ನಿಲ್ದಾಣದಲ್ಲಿ ಹುಡುಕಿದರು.
ಪರಿಚಯಸ್ಥರು, ಸಂಬಂಧಿಕರು ಎಲ್ಲಾ ಕಡೆ ಹುಡುಕಿದರೂ ಮಹೇಶ ಮಡಿವಾಳರ ಸುಳಿವು ಸಿಗಲಿಲ್ಲ. ಅವರ ಫೋನ್ ಸಹ ಸ್ವಿಚ್‌ಆಫ್ ಬರುತ್ತಿದ್ದು, ಇದೀ ಅವರ ಸಂಬಂಧಿಕರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.