ಹೊನ್ನಾವರ : ‘ಕ್ಯಾಥೋಲಿಕ್ ಕ್ರೈಸ್ತ ಸಂಘ ಕಾರವಾರ ಇದರ ಹೊನ್ನಾವರ ಘಟಕದಿಂದ ಸೋಮವಾರದಂದು ಪಟ್ಟಣದಲ್ಲಿ ವಿಜೃಂಭಣೆಯಿಂದ ಕ್ರಿಸ್ಮಸ್ ಟ್ಯಾಬ್ಲೋ ಸಂಚರಿಸಿತು.
ಬಿಕಾಸಿ ತಾರಿಯಿಂದ ಪ್ರಾರಂಭಗೊಂಡ ಟ್ಯಾಬ್ಲೋ ವಿವಿಧ ಸ್ಥಳಗಳಲ್ಲಿ ನಿಂತು ಬಾಲ ಯೇಸುಕ್ರಿಸ್ತರ ಜನನದ ಕುರಿತು ಸಂದೇಶವನ್ನು ಸಾರಿತು. ಹೊನ್ನಾವರ ಘಟಕದ ಮುಖ್ಯ ಗುರುಗಳಾದ ಫಾದರ್ ಥಾಮಸ್ ಫರ್ನಾಂಡಿಸ್ ಈ ಸಂಧರ್ಭದಲ್ಲಿ ನೆರೆದವರಿಗೆ ಶುಭ ಸಂದೇಶವನ್ನು ನೀಡಿ ಹಾರೈಸಿದರು.
ಡಾ. ಆಶಿಕ್‌ಕುಮಾರ್ ಹೆಗಡೆಯವರು ಎಲ್ಲ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ರೋಟರಿಯನ್ ದಿನೇಶ್ ಕಾಮತ್ ಮಾತನಾಡಿ ಕ್ರೈಸ್ತರು ಸಮಾಜಕ್ಕೆ ನೀಡಿರುವ ಕೊಡುಗೆ ಅತ್ಯಮೂಲ್ಯವಾದದ್ದು ಕ್ಯಾಥೋಲಿಕ್ ಕ್ರೈಸ್ತ ಧರ್ಮವು ಶಾಂತಿ ಪ್ರಿಯರ ಧರ್ಮ ಎಂದು ಅವರು ತಿಳಿಸಿ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು. ಪ. ಪಂ. ಮಾಜಿ ಅಧ್ಯಕ್ಷ ಆಜಾದ್ ಅಣ್ಣಿಗೇರಿ ಸಹ ನೆರೆದವರಿಗೆಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಕೆಳಗಿನ ಪಾಳ್ಯ, ಬಂದರ್, ಬಸ್ ನಿಲ್ದಾಣ, ಟಪ್ಪರ್ ಸರ್ಕಲ್, ಹೈವೇ ಸರ್ಕಲ್, ಬಾಂದೇ ಹಳ್ಳ, ಕರ್ಕಿ ನಾಕ, ಎಮ್ಮೆ ಪೈಲ್, ಗಾಂಧಿನಗರ್, ಸೇಂಟ್ ಇಗ್ನೇಶಿಯಸ್ ರಸ್ತೆ ಮುಂತಾದ ಸ್ಥಳಗಳಲ್ಲಿ ಟ್ಯಾಬ್ಲೋ ಸಂಚರಿಸಿ ಉತ್ಸಾಹಭರಿತ ಸಂಗೀತ, ಹಾಡುವಿಕೆ ಮತ್ತು ನೃತ್ಯದ ಜೊತೆಗೆ ಒಟ್ಟಾರೆ ಹಬ್ಬದ ವಾತಾವರಣವನ್ನೇ ಸ್ರಷ್ಟಿ ಮಾಡಿತ್ತು. ಸ್ಥಳೀಯರು ಸಹ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಕ್ರಿಸ್ಮಸ್ ಹಬ್ಬದ ಸಂತಸ ವ್ಯಕ್ತಪಡಿಸಿದರು.
ಸಂತಾ ಕ್ಲಾಸ್ ಪಟ್ಟಣದಲ್ಲಿ ವಾಹನವನ್ನು ಚಲಾಯಿಸುತ್ತಾ ಸಿಹಿ ಹಂಚಿದ್ದು ವಿಶೇಷವಾಗಿತ್ತು. ಕ್ರೈಸ್ತ ಸಮಾಜದ ಜಿಲ್ಲಾಧ್ಯ ಜೋರ್ಜ ಫರ್ನಾಂಡಿಸ್ ರವರ ಮುಂದಾಳತ್ವದಲ್ಲಿ ಈ ಕ್ರಿಸ್ಮಸ್ ಟ್ಯಾಬ್ಲೋ ಸಂಚರಿಸಿತು. ಉಪಾಧ್ಯಕ್ಷ ಸ್ಟೀಫನ್ ರೋಡ್ರಿಗೀಸ್ ಟ್ಯಾಬ್ಲೋ ಗೆ ಸಹಕರಿಸಿದ ಬೆಂಗಳೂರು ಬಾಯ್ಸ್, ಹೊನ್ನಾವರ ಘಟಕದ ಅಧ್ಯಕ್ಷ ಹೆನ್ರಿ ಲೀಮಾ, ಭಟ್ಕಳ ಘಟಕದ ಅಧ್ಯಕ್ಷ ವಿಲ್ಸನ್ ಫರ್ನಾಂಡಿಸ್ ಹಾಗೂ ಎಲ್ಲಾ ಚರ್ಚಿನ ಧರ್ಮ ಗುರುಗಳಿಗೆ ವಂದಿಸಿದರು.