ಜ.21 ಕ್ಕೆ ಪೂರ್ವಭಾವಿ ಸಭೆ: ಅನಂತಮೂರ್ತಿ ಹೆಗಡೆ ಮಾಹಿತಿ
ಯಲ್ಲಾಪುರ: ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಕದಂಬ ಕನ್ನಡ ಜಿಲ್ಲೆ ರಚನೆಗೆ ಹೋರಾಟ ನಡೆಯುತ್ತಿದೆ. ಯಲ್ಲಾಪುರದ ಜನರ ಬೆಂಬಲ, ಅಭಿಪ್ರಾಯ ಸಂಗ್ರಹಣೆಗಾಗಿ ಜ.21 ರಂದು ಮಧ್ಯಾಹ್ನ 3ಕ್ಕೆ ಯಲ್ಲಾಪುರದ ಅಡಕೆ ಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತ ರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅತ್ಯಗತ್ಯ. ಶಿರಸಿಗರಿಗೆ ಶಿರಸಿಯಲ್ಲಿ, ಯಲ್ಲಾಪುರದವರಿಗೆ ಯಲ್ಲಾಪುರದಲ್ಲಿ ಜಿಲ್ಲಾಕೇಂದ್ರವಾಗಬೇಕಂಬ ಭಾವನೆ ಸಹಜ. ಎಲ್ಲ ತಾಲೂಕಿನವರಿಗೂ ಅವರರವರ ಸ್ಥಳದಲ್ಲಿಯೇ ಜಿಲ್ಲಾಕೇಂದ್ರವಾಗಬೇಕು ಎಂಬ ಆಗ್ರಹ ಇದ್ದೇ ಇರುತ್ತದೆ, ಆದರೆ ಮೊದಲು ನಮಗೆ ಜಿಲ್ಲೆ ಘೋಷಣೆ ಆಗಲಿ, ನಂತರ ಎಲ್ಲರಿಗೂ ಅನುಕೂಲವಾಗುವಂತೆ, ಮೂಲಭೂತ ಸೌಕರ್ಯಗಳು ಇರುವ ಸ್ಥಳವನ್ನು ಜಿಲ್ಲಾಕೇಂದ್ರವನ್ನಾಗಿ ಎಲ್ಲರ ಸಹಕಾರದಿಂದ ಮಾಡೋಣ. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಜಿಲ್ಲೆಯ ರಚನೆಗೆ ಪ್ರಯತ್ನಿಸೋಣ. ನಂತರ ಅನುಕೂಲತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಲ್ಲಾ ಕೇಂದ್ರದ ನಿರ್ಣಯವಾಗಲಿ ಎಂದು ಹೇಳಿದರು.
ಕದಂಬರು ಆಳಿದ ನೆಲ ಇದಾಗಿದ್ದು, ಅವರಿಗೆ ಗೌರವ ಸಲ್ಲಿಸುವ ನೆಲೆಯಲ್ಲಿ ಕದಂಬ ಕನ್ನಡ ಹೆಸರಿನಲ್ಲಿ ಜಿಲ್ಲೆಯಾಗಬೇಕು. ಹೋರಾಟ ತೀವ್ರಗೊಳಿಸಲು ನಿರ್ಧರಿಸಿ, ಎಲ್ಲ ತಾಲೂಕುಗಳಲ್ಲಿ ಪೂರ್ವಭಾವಿ ಸಭೆಯೊಂದಿಗೆ ಜನ ಬೆಂಬಲ ಪಡೆಯಲು ಆರಂಭಿಸಿದ್ದೇವೆ. ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಬೆಳಗಾವಿಯಲ್ಲಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಿದಾಗ ಶಾಸಕ ಶಿವರಾಮ ಹೆಬ್ಬಾರ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಸಹ ಹೋರಾಟದಲ್ಲಿ ನಮ್ಮೊಂದಿಗೆ ಇದ್ದು, ಬೆಂಬಲಿಸಿದ್ದಾರೆ. ಆಡಳಿತದವರ ಜತೆ ಜನ ಬೆಂಬಲವೂ ದೊರೆತರೆ ಯಶಸ್ಸು ಸಿಗಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಲ್ಲಾಪುರ ಅಡಕೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿ, ಪ್ರಾಕೃತಿಕವಾಗಿ ಘಟ್ಟದ ಕೆಳಗಿನ ಪ್ರದೇಶಗಳಿಗೆ, ಘಟ್ಟದ ಮೇಲಿನ ಭಾಗಗಳಿಗೆ ಭಿನ್ನತೆಯಿದೆ. ಮೇಲಿನ ಏಳು ತಾಲೂಕುಗಳು ಅರಣ್ಯದಿಂದ ಆವೃತ್ತವಾಗಿರುವ ತಾಲೂಕಾಗಿದ್ದು, ನಮ್ಮ ಜನರ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಸ್ಪತ್ರೆ ಸಿಗಬೇಕೆಂದರೆ ಕದಂಬ ಕನ್ನಡ ಜಿಲ್ಲೆ ಆಗಲೇಬೇಕು ಎಂದು ಹೇಳಿದರು.
ಹಿರಿಯ ಸಹಕಾರಿ ಉಮೇಶ ಭಾಗ್ವತ್ ಮಾತನಾಡಿ, ಪ್ರತ್ಯೇಕ ಜಿಲ್ಲಾ ಹೋರಾಟ ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ, ಪಕ್ಷಾತೀತವಾಗಿ ನಾವೆಲ್ಲ ಬೆಂಬಲಿಸಿ, ಇದಕ್ಕಾಗಿ ಹೋರಾಡಲು ಸಿದ್ಧರಿದ್ದೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಹೋರಾಟ ಸಮಿತಿಯ ವಿ.ಎಂ.ಭಟ್ಟ, ಸ್ಥಳೀಯ ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಉಮೇಶ ಭಾಗ್ವತ, ಗಣಪತಿ ಬೋಳಗುಡ್ಡೆ, ಪ್ರಸಾದ ಹೆಗಡೆ, ರಾಘವೇಂದ್ರ ಭಟ್ಟ, ಗಣೇಶ ಹೆಗಡೆ, ಬಾಬು ಬಾಂದೇಕರ್, ರವಿ ದೇವಾಡಿಗ ಇದ್ದರು.
ಕದಂಬ ಕನ್ನಡ ಜಿಲ್ಲೆ ಎಲ್ಲರ ಅಗತ್ಯವಾಗಿದ್ದು, ಪಕ್ಷಾತೀತವಾಗಿ ನಾವೆಲ್ಲ ಬೆಂಬಲಿಸಬೇಕಿದೆ – ಉಮೇಶ ಭಾಗ್ವತ್, ಹಿರಿಯ ಸಹಕಾರಿ
ನಮ್ಮ ಜನರ ಮೂಲಭೂತ ಅವಶ್ಯಕತೆಗಳಾದ ಆರೋಗ್ಯ, ಶಿಕ್ಷಣ ದೊರೆಯಲು ಪ್ರತ್ಯೇಕ ಜಿಲ್ಲೆ ಆಗಲೇಬೇಕಿದೆ. ನಾವೆಲ್ಲ ಒಕ್ಕೊರಲಾಗಿ ಕದಂಬ ಕನ್ನಡ ಜಿಲ್ಲೆಗೆ ಸಹಕಾರ ನೀಡುತ್ತೇವೆ. – ಎಂ.ಆರ್. ಹೆಗಡೆ, ಕುಂಬ್ರಿಗುಡ್ಡೆ, ಮಾಜಿ ಅಧ್ಯಕ್ಷರು, ಅಡಕೆ ವರ್ತಕರ ಸಂಘ, ಯಲ್ಲಾಪುರ
ಕದಂಬ ಕನ್ನಡ ಜಿಲ್ಲೆಗೆ ಎಲ್ಲ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ. ಜನರ ಆಗ್ರಹವಾಗಿ ಕದಂಬ ಕನ್ನಡ ಜಿಲ್ಲೆ ಹೋರಾಟ ರೂಪುಗೊಳ್ಳುತ್ತಿದೆ. ಎಲ್ಲರೂ ಒಗ್ಗೂಡಿ ಜಿಲ್ಲಾ ಹೋರಾಟದ ಗಟ್ಟಿಧ್ವನಿಯನ್ನು ಸರಕಾರಕ್ಕೆ ಮುಟ್ಟಿಸಬೇಕಿದೆ. – ಅನಂತಮೂರ್ತಿ ಹೆಗಡೆ, ಅಧ್ಯಕ್ಷರು, ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್