ಸಿದ್ದಾಪುರ: ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಳಸಿರುವ ಅವಾಚ್ಯ ಶಬ್ದ ಸ್ತ್ರೀ ಕುಲಕ್ಕೆ ಮಾಡಿರುವ ಅಪಮಾನ ಎಂದು ತಾಲೂಕು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಎಂ.ಹೆಗಡೆ ಕಲ್ಮನೆ ಖಂಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ‘ಯತ್ರ ನರ್ಯಾಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಹ’ ಎನ್ನುವದನ್ನು ನಂಬಿ ಬಂದ ಸಂಸ್ಕಾರ ದೇಶದಲ್ಲಿ ನಾವು ಇದ್ದೇವೆ. ದೇಶವನ್ನು ಮತ್ತು ಭೂಮಿಯನ್ನು ತಾಯಿ ಅಂದರೆ ಹೆಣ್ಣು ಅಂತ ಪೂಜೆ ಮಾಡುವ ಸಂಸ್ಕಾರ ಹೊಂದಿದ ದೇಶ ನಮ್ಮದು. ಅಂತಹ ಸುಸಂಸ್ಕೃತ ಪರಂಪರೆ ಉಳ್ಳಂತಹ ನಮ್ಮ ದೇಶದಲ್ಲಿ ಕೆಲವು ಬಚ್ಚಲು ಬಾಯಿ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್ ನಾಯಕರು ನಾವು ದೇಶ,ಸಂಸ್ಕೃತಿ ಮತ್ತು ಧರ್ಮವನ್ನು ಗುತ್ತಿಗೆ ಪಡೆದಿದ್ದೇವೆ ಅನ್ನುವಂತವರು ಹೆಣ್ಣಿನ ಮೇಲೆ ಹಿಂದಿನಿಂದಲೂ ಅವಾಚ್ಯ ಶಬ್ದ ಮಾತನಾಡಿರುವ ಉದಾಹರಣೆ ಇದೆ. ಅದೇ ಸಂಸ್ಕೃತಿಯಲ್ಲಿ ಬೆಳೆದು ಬಂದ ಸಿ.ಟಿ.ರವಿ ನಮ್ಮ ನಾಯಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಳಸಿರುವ ಶಬ್ದ ಸರಿ ಅಲ್ಲ.
ಸಿ.ಟಿ.ರವಿ ಅವರನ್ನು ಸಮರ್ಥಿಸುವ ಬಿಜೆಪಿ ನಾಯಕರಿಗೆ ತಾಯಿ, ಅಕ್ಕ,ತಂಗಿ, ಮಗಳು ಯಾರೂ ಇಲ್ಲವೇ?. ಬಿಜೆಪಿ ನಾಯಕರು ಅವರನ್ನು ಸಮರ್ಥಿಸದೇ ಒಂದು ಹೆಣ್ಣಿನ ಪರವಾಗಿ ನಿಲ್ಲಬೇಕಿತ್ತು. ಅದನ್ನು ಬಿಟ್ಟು ಅವರ ಪರ ನಿಂತ್ತಿರುವುದು ಘೋರ ಅಪರಾಧ. ಬಿಜೆಪಿ ಅವರಿಗೆ ಹೆಣ್ಣಿನ ಮೇಲೆ ಗೌರವ ಇದ್ದರೆ ಅವರನ್ನು ಪಕ್ಷದಿಂದ ಉಚ್ಚಾಟಿಸಲಿ.
ಈ ಪ್ರಕರಣವನ್ನು ಸಭಾಪತಿಗಳು ಗಂಬೀರವಾಗಿ ಪರಿಗಣಿಸಿ ಸಿಟಿ ರವಿ ಅವರನ್ನ ಪರಿಷತ್ ಸದಸ್ಯತ್ವದಿಂದ ಅಮಾನತ್ತುಗೊಳಿಸಬೇಕು ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಲ್ಲಿ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.