ಸಿದ್ದಾಪುರ: ಜಾನಪದದಲ್ಲಿ ಶಾಸ್ತ್ರೀಯವಾಗಿರುವ ಯಕ್ಷಗಾನ ಕಲೆ ಶ್ರೇಷ್ಠವಾಗಿದೆ. ಯಕ್ಷಗಾನ ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ದಾರಿದೀಪವಾಗಿದೆ ಎಂದು ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ತಾಲೂಕಿನ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇವರ ಸಹಕಾರದೊಂದಿಗೆ ಕೋಡಿಗದ್ದೆ ಮೂಕಾಂಬಿಕಾ ದೇವಾಲಯದ ಆವಾರದಲ್ಲಿ ಸುಬ್ರಾಯ ಹೆಗಡೆ ಇಳ್ಳಿಮನೆ ಇವರ ನೆನಪಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವನ್ನು ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು. ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಸಂಘಟನೆ ಮಾಡುವುದು ಕಷ್ಟ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಸಂಘಟನೆ ಮಾಡುವುದು ಮತ್ತಷ್ಟು ಕಷ್ಟ. ಸಂಘಟಕರಿಗೆ ಪ್ರೋತ್ಸಾಹ ನೀಡಬೇಕು. ಇಳ್ಳಿಮನೆ ಸುಬ್ರಾಯ ಹೆಗಡೆ ಒಬ್ಬ ಸಂಘಟಕರಾಗಿ, ಕಲಾವಿದರಾಗಿದ್ದಿದ್ದಲ್ಲದೇ ಒಬ್ಬ ಸ್ನೇಹ ಜೀವಿಯಾಗಿದ್ದರು ಎಂದು ಹೇಳಿದರು.
ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಮಾತನಾಡಿ ಕ್ರೀಯಾಶೀಲ ಸಾಂಸ್ಕೃತಿಕ ಚಟುವಟಿಕೆ ನಡೆಸುವುದು ಮುಖ್ಯ. ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಸಾಮಾಜಿಕ ಬದಲಾವಣೆಯನ್ನು ಕಾಣಬಹದಾಗಿದೆ. ಇದರಲ್ಲಿ ಎಲ್ಲರ ಭಾಗವಹಿಸುವಿಕೆ ಮುಖ್ಯ ಎಂದು ಹೇಳಿದರು.
ನಿವೃತ ಮುಖ್ಯಾಧ್ಯಾಪಕ ಹಾಗೂ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಕೋಡಿಗದ್ದೆ ದೇವಾಲಯ ಕಮಿಟಿ ಅಧ್ಯಕ್ಷ ಶ್ರೀರಾಮ ಆರ್. ಹೆಗಡೆ ಕೌಂಸ್ಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ರಾಘವ ವೆಂಕಪ್ಪ ಹೆಗಡೆ ನಾಗಿನಮನೆ ದಂಪತಿ ಅವರನ್ನು ಸನ್ಮಾನಿಸಲಾಯಿತು.ಶ್ರೀಧರ ಭಟ್ಟ ಗಡಿಹಿತ್ಲ ಅಭಿನಂದನಾ ಮಾತನಾಡಿದರು. ತಿಮ್ಮಪ್ಪ ಭಟ್ಟ ಅವರು ಸುಬ್ರಾಯ ಹೆಗಡೆ ಇಳ್ಳಿಮನೆ ಅವರ ಕುರಿತು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಜಿ. ಹೆಗಡೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಭಟ್ಟ ವಂದಿಸಿದರು. ಕೇಶವ ಹೆಗಡೆ ಕಿಬ್ಳೆ ಹಾಗೂ ಮಾಧವ ಶರ್ಮಾ ಕಲಗಾರ ನಿರ್ವಹಿಸಿದರು. ನಂತರ ಪ್ರಸಿದ್ಧ ಕಲಾವಿದರಿಂದ ಪಾರಿಜಾತ-ನರಕಾಸುರವಧೆ ಯಕ್ಷಗಾನ ಪ್ರದರ್ಶನಗೊಂಡಿತು.
ಹಿಮ್ಮೇಳದಲ್ಲಿ ಸೃಜನ್ ಗಣೇಶ ಹೆಗಡೆ, ಮಂಜುನಾಥ ರಾವ್ ಗುಡ್ಡೆದಿಂಬ, ಗಣೇಶ ಭಟ್ಟ ಕೆರೆಕೈ, ಶ್ರೀವತ್ಸ ಗುಡ್ಡೆದಿಂಬ ಸಹಕರಿಸಿದರು. ಮುಮ್ಮೇಳದಲ್ಲಿ ನರಸಿಂಹ ಚಿಟ್ಟಾಣಿ, ಪ್ರಣವ್ ಭಟ್ಟ, ಮಹಾಬಲೇಶ್ವರ ಇಟಗಿ, ಯುವರಾಜ ನಾಯ್ಕ, ಮಹಾಬಲೇಶ್ವರ ಗೌಡ, ವೆಂಕಟೇಶ ಹೆಗಡೆ, ಮಹಾಬಲೇಶ್ವರ ಕ್ಯಾದಗಿ, ಸದಾಶಿವ ಭಟ್ಟ ಮಲವಳ್ಳಿ, ಷಣ್ಮುಖ ಗೌಡ ಬಿಳೆಗೋಡು, ಕು.ಆಶ್ರೀತಾ ಹೆಗಡೆ, ಕು.ಪ್ರಾರ್ಥನಾ ಭಟ್ಟ ಇತರರು ಪಾತ್ರನಿರ್ವಹಿಸಿದರು.