✍🏻ರಾಜೀವ ಹೆಗಡೆ
ಉತ್ತರ ಕನ್ನಡ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ದಶಕಗಳಿಂದ ಜನರು ಅಕ್ಷರಶಃ ಬೇಡುತ್ತಿದ್ದಾರೆ. ಜನರ ಬಗ್ಗೆ ಕಿಂಚಿತ್ ಕಾಳಜಿಯಿಲ್ಲದ ಜನಪ್ರತಿನಿಧಿಗಳೆಲ್ಲ ಚುನಾವಣೆ ಸಂದರ್ಭದಲ್ಲಿ ಮೊಸಳೆ ಕಣ್ಣೀರು ಸುರಿಸಿ ನಾಪತ್ತೆಯಾಗುತ್ತಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಂತೂ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಸ್ಥಳೀಯ ಪ್ರಣಾಳಿಕೆಯಲ್ಲಿ ಅದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಲ್ಲೇಖವಾಗಿತ್ತು. ಹೊಸ ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾದರೂ ಯಾರಿಗೂ ಈ ಆಸ್ಪತ್ರೆ ಬಗ್ಗೆ ಗಮನವೂ ಇಲ್ಲ. ಪುಕ್ಕಟೆ ಹಂಚಿದ್ದೇವೆ ಎನ್ನುವ ಧಿಮಾಕಿನಲ್ಲಿ ಕ್ವಾಲರ್ ಏರಿಸಿಕೊಂಡು ಓಡಾಡುವರಿಗೆ ಇದೆಲ್ಲಿಂದ ನೆನಪಾಗಬೇಕು.
ಆದರೆ ಈಗ ಈ ವಿಷಯ ಬರೆಯಲು ಕಾರಣ ಇನ್ನೊಂದಿದೆ. ನಮ್ಮ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಂತೂ ತರುವ ಧಮ್ಮಿಲ್ಲ. ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಕಂಬಳಿ, ಚಾದ್ರ ಹಾಕಿಕೊಂಡು ನಿದ್ರೆ ಮಾಡುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವೂ ಇಲ್ಲ. ಆದರೆ ಇಲ್ಲಿರುವ ಆಸ್ಪತ್ರೆಗಳ ಮೂಲಕ ಕನಿಷ್ಠ ಪಕ್ಷ ಜನರ ಜೀವ ಉಳಿಸುವ ಕೆಲವನ್ನಾದರೂ ಮಾಡುತ್ತಾರೆ ಎನ್ನುವ ವಿಶ್ವಾಸ ಕೂಡ ಹೋಗಿದೆ.
ಭಾನುವಾರ ಮಧ್ಯಾಹ್ನ ೧೧ ಗಂಟೆ ವೇಳೆಗೆ ಶಿರಸಿಯ ಜಾನ್ಮನೆ ಬಳಿಯಲ್ಲಿ ನನ್ನ ಸ್ನೇಹಿತರೊಬ್ಬರ ಪರಿಚಯದವರಿಗೆ ಅಪಘಾತವಾಗಿದೆ. ಅವರು ಕೂಡಲೇ ಶಿರಸಿ ಸರ್ಕಾರಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಸುಮಾರು ಅರ್ಧ ಗಂಟೆಯಷ್ಟರಲ್ಲಿ ಸ್ಥಳಕ್ಕೆ ಆಂಬುಲೆನ್ಸ್ ಬಂತು. ಆದರೆ ನಮ್ಮ ಸರ್ಕಾರದ ಆರೋಗ್ಯ ಎಷ್ಟು ಹದಗೆಟ್ಟಿದೆಯೆಂದರೆ, ಆ ಆಂಬುಲೆನ್ಸ್‌ನಲ್ಲಿ ಯಾರೊಬ್ಬರೂ ಪ್ಯಾರಾ ಮೆಡಿಕಲ್ ಸಿಬ್ಬಂದಿ ಇರಲಿಲ್ಲ. ಚಾಲಕನ ಹೊರತಾಗಿ ಗಾಯಾಳುವನ್ನು ಕಾಳಜಿ ಮಾಡಲು ಯಾರೂ ಇರಲಿಲ್ಲ. ರಸ್ತೆ ಮಧ್ಯದಲ್ಲಿ ಏನಾದರೂ ಸಮಸ್ಯೆಯಾದರೆ ನೋಡುವರು ಯಾರು?
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲದೇ ಅದೆಷ್ಟೋ ಜನರು ದೂರದ ಧಾರವಾಡ, ಶಿವಮೊಗ್ಗ, ಮಣಿಪಾಲ್, ಮಂಗಳೂರಿಗೆ ಓಡುವ ಭರದಲ್ಲಿ ಜೀವ ಕಳೆದುಕೊಂಡಿದ್ದಾರೆ. ಆದರೆ ಕನಿಷ್ಠ ಪ್ರಾಥಮಿಕ ಚಿಕಿತ್ಸೆಗೆ ಆಂಬುಲೆನ್ಸ್‌ಗೆ ಒಂದರಂತೆ ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ನೀಡದ ಮಟ್ಟಿಗೆ ಸರ್ಕಾರ ಕೆಟ್ಟಿದೆಯೆಂದರೆ, ಅಂತಹ ವ್ಯವಸ್ಥೆಯನ್ನು ಏನೆಂದು ಕರೆಯಬೇಕು? ಪ್ಯಾರಾ ಮೆಡಿಕಲ್ ಸಿಬ್ಬಂದಿಯಿರದ ಒಂದು ಆಂಬುಲೆನ್ಸ್‌ನ್ನು ಸ್ಥಳಕ್ಕೆ ಕಳುಹಿಸುವಂತಹ ಅಧಿಕಾರಿಗಳು ಆರೋಗ್ಯ ಇಲಾಖೆಯಲ್ಲಿದ್ದಾರೆ ಎಂದರೆ ಅವರಿಗೆ ಎಂಬಿಬಿಎಸ್ ಪದವಿ ನೀಡಿದವರಿಗೆ ದೊಡ್ಡ ಪದವಿ ನೀಡಬೇಕಿದೆ. ಪ್ರಥಮ ಚಿಕಿತ್ಸೆ ನೀಡಲು ಸಿಬ್ಬಂದಿ ಇಲ್ಲವೆಂದಾದರೆ, ಅಲ್ಲಿರುವ ಜನರೇ ತಮ್ಮ ಕಾರಿನಲ್ಲೋ ಅಥವಾ ಇನ್ಯಾವುದೋ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದಲ್ಲವೇ?
ಅಪಘಾತ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌ಗೆ ಕರೆ ಮಾಡುವ ಪ್ರಮುಖ ಉದ್ದೇಶ ಏನೆಂದರೆ, ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಯಾವುದೇ ರೀತಿಯ ತುರ್ತು ಚಿಕಿತ್ಸೆ ಬೇಕಿದ್ದರೆ ವೈದ್ಯರ ಸಲಹೆ ಮೇರೆಗೆ ಪ್ಯಾರಾ ಮೆಡಿಕಲ್ ಸಿಬ್ಬಂದಿ ಕಾರ್ಯನಿರ್ವಹಿಸಲಿ ಎಂದಾಗಿರುತ್ತದೆ. ಇಲ್ಲವಾದಲ್ಲಿ ಆಂಬುಲೆನ್ಸ್ ಹಾಗೂ ಶವ ಹೊರುವ ವಾಹನಕ್ಕೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಾಗೆಯೇ ಅಪಘಾತದಲ್ಲಿನ ಗಾಯಾಳುವಿಗೆ ಗೋಲ್ಡನ್ ಅವಧಿಯಲ್ಲಿ ಚಿಕಿತ್ಸೆ ನೀಡದಿದ್ದರೆ ಅದರಿಂದಾಗುವ ಪರಿಣಾಮವೂ ಅಷ್ಟೇ ಕೆಟ್ಟದಾಗಿರುತ್ತದೆ.
ಕೊನೆಯದಾಗಿ: ಮಲ್ಟಿ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡುವಂಥ ಕಾಳಜಿಯಿಂತೂ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು, ಸಚಿವರಿಗಿಲ್ಲ. ಆದರೆ ಅಗತ್ಯ ಸಿಬ್ಬಂದಿಯನ್ನಾದರೂ ನೀಡಿ, ಜನರ ಜೀವ ಕಾಪಾಡುವ ಕೆಲಸ ಮಾಡಿ. ಅಂದ್ಹಾಗೆ ಸ್ಥಳೀಯರ ನೆರವಿನಿಂದ ಅಪಘಾತಕ್ಕೀಡಾಗಿದ್ದ ದಂಪತಿ ಸುರಕ್ಷಿತವಾಗಿದ್ದಾರಂತೆ. ನಮ್ಮೂರಿನ ಜನರಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸ್ವಲ್ಪ ಕಾರ್ಯಪ್ರವೃತ್ತರಾದರೆ ಒಳಿತು.