ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು ಮನನೊಂದು ಹೇಳಿದ ಒಂದು ಘಟನೆ ನೆನಪಿಗೆ ಬಂತು ಹಾಗೂ ಹೇಳಿದ ಘಟನೆ ಬಗ್ಗೆ ವಿಶ್ಲೇಷಣೆ ಮಾಡುವ ಅವಶ್ಯಕತೆ ಉಂಟಾಗಿದೆ.
‘ಸರ್ ನೀವು ಹೇಳಿದ ಈ ವರ್ಷದ ಮಾದರಿ ಪ್ರಶ್ನೆ ಪತ್ರಿಕೆ, ಪುನರಾವರ್ತನೆ ಪತ್ರಿಕೆ, ಸರಣಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಎಷ್ಟೆಲ್ಲ ಸಲ ಬಿಡಿಸಿದರು ಸಹ ನನಗೆ ನೂರಕ್ಕೆ ನೂರರಷ್ಟು ಅಂಕ ತೆಗೆಯಲು ಆಗಲಿಲ್ಲ, ಇದರಿಂದ ನಾನು ವಿಜ್ಞಾನ ಅಧ್ಯಯನವನ್ನು ಕೈ ಬಿಟ್ಟು ಬೇರೆ ವಿಷಯ ಆರಿಸಿಕೊಳ್ಳಬೇಕಾದ ಅನಿವಾರ್ಯತೆ ಬಂತು’ ಎಂದು ಜಿಲ್ಲೆಗೆ ರ್ಯಾಂಕ್ ಬಂದ ವಿದ್ಯಾರ್ಥಿನಿ ಒಬ್ಬಳು ತನ್ನ ಶಿಕ್ಷಕರಲ್ಲಿ ತೋಡಿಕೊಂಡ ದೃಶ್ಯ ಅತ್ಯಂತ ಮಾರ್ಮಿಕವಾಗಿತ್ತು. ಈ ವಿಷಯವನ್ನು ತಿಳಿದ ವಿಜ್ಞಾನ ವಿಷಯದ ಶಿಕ್ಷಕರು ತುಂಬಾ ಮನನೊಂದುಕೊಂಡರು. ಕಾರಣ ಇಷ್ಟೇ ಮೂರು ವರ್ಷಗಳ ಕಾಲ ಈ ವಿದ್ಯಾರ್ಥಿಯನ್ನು ವಿಜ್ಞಾನ ಕ್ಷೇತ್ರದಲ್ಲಿ ಬೆಳೆಸಿದ ಅದೆಷ್ಟೋ ಸ್ಪರ್ಧೆಗಳು, ಭಾಷಣ, ಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ಇನ್ನಿತರ ಹಲವಾರು ದಿನಾಚರಣೆಗಳು ಎಂದು ತನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ಅವರನ್ನು ತೆಗೆದುಕೊಂಡು ರಾಜ್ಯವೆಲ್ಲ ಸುತ್ತಾಡಿದ ಶಿಕ್ಷಕ ವಿಜ್ಞಾನ ಕ್ಷೇತ್ರಕ್ಕೆ ತನ್ನಿಂದ ಏನಾದರೂ ಒಂದು ಸಂಶೋಧನೆ ಮಾಡುವ ವಿದ್ಯಾರ್ಥಿ ಇವರಾಗುತ್ತಾರೆ ಎಂದು ಹಾಕಿದ ಎಲ್ಲ ಶ್ರಮ ಹಣ ಸಮಯ ವ್ಯರ್ಥವಾಗಿ ಭ್ರಮನಿರಸನ ಹೊಂದಿದ ಪರಿಸ್ಥಿತಿ ಇಂದು ಉಂಟಾಗಿದೆ. ಈ ರೀತಿಯ ಭ್ರಮನಿರಸನಕ್ಕೆ ಕಾರಣ ಇಂದಿನ ಫಲಿತಾಂಶ. ವಿಜ್ಞಾನ ವಿಷಯದಲ್ಲಿ ಬಂದಿರುವಂತಹ ಕಠಿಣತೆ ಜೊತೆಗೆ ನೂರಕ್ಕೆ ನೂರರಷ್ಟು ಅಥವಾ ಪರಿಪೂರ್ಣತೆಯನ್ನು ಪಡೆಯಲಾರದೆ ಇನ್ನುಳಿದ ವಿಷಯಗಳಲ್ಲಿ ಪರಿಪೂರ್ಣತೆಯನ್ನು ಪಡೆದಿರುವುದೇ ಕಾರಣವಾಗಿದೆ. ಉಳಿದ ವಿಷಯದವರು ಹೇಳುವಂತೆ ಎಸ್ಎಸ್ಎಲ್ಸಿಯ ಅಂತಿಮ ಫಲಿತಾಂಶವೇ ನಿರ್ಣಾಯಕ ಎನ್ನುವ ಮಾತು ಸತ್ಯವಾಗಿದೆ. ಅಂತಿಮವಾಗಿ ನಮ್ಮ ವಿಷಯದಲ್ಲಿ ಪರಿಪೂರ್ಣ ಅಂಕವನ್ನು ಪರಿಪೂರ್ಣತೆಯನ್ನು ಪಡೆಯುವಲ್ಲಿ ವಿಜ್ಞಾನ ಶಿಕ್ಷಕರು ಇವತ್ತಿನ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ವಿಜ್ಞಾನ ಶಿಕ್ಷಕರು ಗುಣಾತ್ಮಕ ಫಲಿತಾಂಶವಿಲ್ಲದೆ ಎಲ್ಲಾ ಕಡೆಗೆ ಹಿಂದುಳಿದ ವಿಷಯದ ಶಿಕ್ಷಕರಾಗಿದ್ದಾರೆ. ಒಂದು ಕಾಲದಲ್ಲಿ ವಿಜ್ಞಾನ ಶಿಕ್ಷಕರು ಸಮಾಜದ ಹಲವಾರು ಕ್ಷೇತ್ರಗಳಾದ ಇಂಜಿನಿಯರಿಂಗ್, ಡಾಕ್ಟರ್ ಹಾಗೂ ಸಂಶೋಧಕರು ಮತ್ತು ವಿಶೇಷವಾಗಿ ಬ್ಯಾಂಕಿಂಗ್ ವ್ಯವಸ್ಥೆಗಳಲ್ಲಿ ವಿಜ್ಞಾನವನ್ನು ಅಧ್ಯಯನ ಮಾಡಿದವರು ಹೆಚ್ಚಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆಗಿನ ಕಾಲದಲ್ಲಿ ವಿಜ್ಞಾನ ಶಿಕ್ಷಕರು ರೋಲ್ ಮಾಡೆಲ್ ಆಗಿದ್ದರು. ಮೂಲವಿಜ್ಞಾನದ ಜೊತೆಗೆ ಸಾಗಿದ ದಿನ ಸ್ಮರಣೀಯವಾಗಿತ್ತು ಎಂದು ಹಿರಿಯ ಶಿಕ್ಷಕರ ಅನುಭವದ ಮಾತನ್ನು ಇಂದು ಒಪ್ಪುತ್ತಿಲ್ಲ. ತಂತ್ರಜ್ಞಾನ, ತಾಂತ್ರಿಕತೆ ಬೆಳೆದಂತೆ ವಿಜ್ಞಾನದ ಹರಿವು ಜಾಸ್ತಿಯಾಯಿತು. ವಿಶಾಲ ಜಗತ್ತು ವಿಜ್ಞಾನದ ಮೇಲೆ ಹೆಚ್ಚೆಚ್ಚು ನಿರ್ಧಾರವಾದಂತೆ ಈ ವಿಜ್ಞಾನ ಶಿಕ್ಷಕರ ಮೇಲೆ ಒತ್ತಡ ಜಾಸ್ತಿಯಾಯಿತು ಎಂದು ಅನಿಸುತ್ತಿದೆ. ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಡಳಿತ ಸೇವೆ, ಬ್ಯಾಂಕಿಂಗ್ ಸೇವೆ ಇಂಥ ಕ್ಷೇತ್ರದಲ್ಲಿಯೂ ಸಹ ಹಿಂದಿನ ವಿದ್ಯಾರ್ಥಿಗಳು ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ಹಲವಾರು ಕ್ಷೇತ್ರಗಳನ್ನು ತೆರೆದಿಟ್ಟ ವಿಜ್ಞಾನವನ್ನು ಶಿಕ್ಷಕರು ಅಂದು ಮಕ್ಕಳಿಗೆ ನೀಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇಂದು ಯಾಕೆ ಹೀಗಾಗುತ್ತಿಲ್ಲ ಎನ್ನುವುದನ್ನು ವಿಶ್ಲೇಷಿಸಿದಾಗ ಕಾರಣಗಳ ಪಟ್ಟಿ ಬೆಳೆಯುತ್ತದೆ.
ಮೂಲ ವಿಜ್ಞಾನದ ಹಾದಿ ಮರೆಯುತ್ತಿದ್ದೇವೆ. ಇಲ್ಲವೇ ದೂರವಾಗಿದೆ. ಜ್ಞಾನಾರ್ಜನೆ ಎನ್ನುವುದು ಕೇವಲ ಅಂಕಗಳ ಗಳಿಕೆ ಹಾಗೂ ಉದ್ಯೋಗಕ್ಕೆ ಸೇರಿ ಜೀವನವನ್ನು ಕಟ್ಟಿಕೊಳ್ಳುವುದೇ ಆಗಿದೆ. ವಿಜ್ಞಾನದ ಅಧ್ಯಯನ ತುಂಬಾ ದಿನದ ಹಾಗೂ ಸಮಯವನ್ನು ತೆಗೆದುಕೊಳ್ಳುತ್ತದೆ ಎನ್ನುವ ರೀತಿಯಲ್ಲಿ ತಂದೆ ತಾಯಿಗಳ ವಿಶ್ಲೇಷಣೆಯು ಇದರ ಜೊತೆಗೆ ಸೇರಿಕೊಂಡಿದೆ. ವಿಜ್ಞಾನಿಗಳಾಗಲು 60 ವರ್ಷಗಳ ಕಾಲ ಕಾಯುವ 30 ವರ್ಷಗಳ ಕಾಲ ಹಾಗೆ ಸಂಶೋಧನೆ ಮಾಡುವ ಮನಸ್ಥಿತಿ ಇಂದು ಇಲ್ಲ. ವಿಜ್ಞಾನದ ಕಲಿಕೆ ಇಂದು ಕೇವಲ ಅಂಕಗಳಿಂದ ನಿರ್ಧಾರವಾಗುವ ಈ ಹಂತ ಶಿಕ್ಷಕರ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿದೆ ಮತ್ತು ಮಕ್ಕಳು ಗುಲಾಮರಾಗುವಂತೆ ಮಾಡಿದೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ತುಂಬಿ ಜೀವನಕ್ಕೆ ತೆರೆದಿಡುವ ಕಾರ್ಯ ಮಾಡುವ ವಿಜ್ಞಾನ ಶಿಕ್ಷಕ ಇಂದು ಸೋತಿದ್ದಾನೆ. ಅವನು ಕೇವಲ ಅಂಕಗಳ ನಿರೂಪಕನಾಗಿದ್ದಾನೆ. ನಿಯಮ ಘಟನೆ ಹೇಳಿ ಅದರ ಪರಿಣಾಮ ಪ್ರಯೋಗ ಮಾಡಿ ತೋರಿಸುವ ವ್ಯಕ್ತಿ ಸೋತು ಯಂತ್ರವಾಗಿದ್ದಾನೆ. ವೈಚಾರಿಕತೆ ಯೋಚನಾ ಶಕ್ತಿ, ಸ್ವಂತ ವಿಮರ್ಶಕ ಬುದ್ಧಿ, ಸಮಯ ಪ್ರಜ್ಞೆ ,ಎಲ್ಲವನ್ನು ವಿಷಯವಾರು ಹೋಲಿಕೆಯ ಗುಣಮಟ್ಟದ ಪ್ರತಿಶತ ಪ್ರಮಾಣದಲ್ಲಿ ಮುಳುಗಿ ಹೋಗಿದೆ . ಅಂಕಗಳೇ ಮಾನದಂಡವಾಗಿ ವಿಜ್ಞಾನದ ಅನೇಕ ಸ್ಪರ್ಧೆಯ ಬಹುಮಾನ ,ಪ್ರಶಸ್ತಿ ಅದಕ್ಕೆ ವಿಜ್ಞಾನ ಶಿಕ್ಷಕ ಪಟ್ಟ ಶ್ರಮ ಎಲ್ಲವೂ ಮೂಲೆಗುಂಪಾಗಿದೆ. ಈ ರೀತಿಯಲ್ಲಿ ಅವನ ಮೂಲೆಗುಂಪಾಗುವಿಕೆ ಸಮಾಜದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿಜ್ಞಾನ ಮಾತ್ರ ಅದಕ್ಕೆ ನಿರಂತರವಾಗಿ ಜೊತೆಯಾಗಿ ಸಾಗುತ್ತದೆ ಎನ್ನುವುದನ್ನು ತಿಳಿಸುತ್ತಾ ಅವನು ಎಲ್ಲೋ ಒಂದು ಕಡೆಯಲ್ಲಿ ಸೋತಿದ್ದಾನೆ, ಎಂದು ಅನಿಸುತ್ತದೆ. ಇಂದಿನ ಈ ಸ್ಥಿತಿ ಬದಲಾಗದಿದ್ದರೆ ಮುಂದೊಂದು ದಿನ ಎಲ್ಲವೂ ಯಾಂತ್ರಿಕ ಜೀವನವಾಗಿ ಅನುಕರಣೆಯಾಗುವ ಹಂತ ತಲುಪುವುದು ಖಂಡಿತ. ವಿಜ್ಞಾನ ಶಿಕ್ಷಕ ಸೋತು ಸುಣ್ಣವಾಗಿದ್ದಾನೆ. ಅವನಿಗೊಂದು ಬಲವನ್ನು ತುಂಬೋಣವೇ ಕೀಳರಿಮೆಯಿಂದ ಕಾಣುವ ಅಕ್ಕ ಪಕ್ಕದವರಿಗೆ ಸಮರ್ಥವಾಗಿ ಉತ್ತರವನ್ನು ನೀಡುವ ಮನೋಸ್ಥೈರ್ಯವನ್ನು ಹೊಂದಲಿ. ತನ್ಮೂಲಕ ವಿಜ್ಞಾನದ ಪ್ರಗತಿ ಮಾನವ ಜೀವನದ ಉನ್ನತಿ ವಿಜ್ಞಾನದ ಜೊತೆ ಜೊತೆಗೆ ಬರಲಿ ಎಂದು ಆಶಿಸೋಣ.
ಎಂ.ರಾಜಶೇಖರ
ವಿಜ್ಞಾನ ಶಿಕ್ಷಕರು, ಹೋಲಿ ರೋಸರಿ ಪ್ರೌಢಶಾಲೆ ಯಲ್ಲಾಪುರ
ಅಧ್ಯಕ್ಷರು, ವಿಜ್ಞಾನ ಬಳಗ ಸಿರಸಿ ಶೈಕ್ಷಣಿಕ ಜಿಲ್ಲೆ, ಹಾಗೂ ವಿಜ್ಞಾನ ಸಂವಹನಾಕಾರರು, ಜಿಲ್ಲಾ ಸಂಚಾಲಕರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು.