ಸಿದ್ದಾಪುರ. ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನವರಾತ್ರಿಯ ಅಂಗವಾಗಿ ನಡೆಯುತ್ತಿರುವ ಸಂಸ್ಕೃತಿ ಸಂಪದೋತ್ಸವದ ನಾಲ್ಕನೇ ಸಂಜೆ ಶಾಸ್ತ್ರೀಯ ಹಾಗೂ ಲಘು ಸಂಗೀತ ನಡೆಯಿತು.
ಕಾರ್ಯಕ್ರಮವನ್ನು ಪ್ರಾರಂಭಿಸಿದ ಗಾಯಕಿ ರೇಷ್ಮಾ ಭಟ್ಟ ಕುಮಟಾ ಮೊದಲಿಗೆ ರಾಗ ಸಾವನಿ ಕಲ್ಯಾಣ ಪ್ರಸ್ತುತ ಪಡಿಸಿ, ನಂತರ ದಾಸರಪದಗಳನ್ನು ಸುಶ್ರಾವ್ಯವಾಗಿ ಹಾಡಿದರು. ಮುಂದೆ ಡಾ. ಅಶೋಕ ಹುಗ್ಗಣ್ಣನವರು ಪ್ರಸ್ತುತ ಪಡಿಸಿದ ಭಾಗ್ಯದ ಲಕ್ಷ್ಮಿ ಬಾರಮ್ಮ, ಅಕ್ಕ ಕೇಳವ್ವ, ಅಂಬಾಗಾರತಿಯನ್ನು ರಂಬೇರು ಬೆಳಗೀರೆ ಮುಂತಾದ ಹಾಡುಗಳು ಕರ್ಣಮಧುರವಾಗಿ ಮೂಡಿಬಂದವು. ‘ಶಾರದೆ ಶುಭಕಾರಿ ಜಯ ಜಯ’ ಹಾಡು ರಾಗ ಭೈರವಿಯಲ್ಲಿ ಮೂಡಿಬಂತು. ಅಲ್ಲಮಪ್ರಭು ಕಡಕೋಳ ಹಾಗೂ ಎನ್.ಜಿ.ಹೆಗಡೆ ಕಪ್ಪೆಕೆರೆ ಅವರ ಕಲಾತ್ಮಕ ತಬಲಾ ಸಾತ್, ಪ್ರಕಾಶ ಹೆಗಡೆ ಯಡಳ್ಳಿಯವರ ಸಮರ್ಥ ಸಂವಾದಿನಿ, ಅನಂತಮೂರ್ತಿ ಭಟ್ಟ ಮತ್ತಿಘಟ್ಟ ಮತ್ತು ಧಾತ್ರಿ ಹೆಗಡೆ ಗೋಳಗೋಡ ಇವರ ತಾಳದ ಜೊತೆಗೆ ಮಮತಾ ಕೋಡಕಣಿಯವರ ತಂಬೂರ ಮೇಳೈಸಿ ಸಂಗೀತ ಕಾರ್ಯಕ್ರಮವು ಪ್ರೇಕ್ಷಕರ ಮನಸೆಳೆಯಿತು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಕಲಾವಿದರನ್ನು ಗೌರವಿಸಿದರು. ಗಣಪತಿ ಹಿತ್ತಲಕೈ ಸ್ವಾಗತಿಸಿ ಪರಿಚಯಿಸಿದರು.