Slide
Slide
Slide
previous arrow
next arrow

ಒಕ್ಕಲೆಬ್ಬಿಸದಂತೆ ಅರಣ್ಯ ಅಧಿಕಾರಿಗಳಿಗೆ ಸೂಚನೆ: ಈಶ್ವರ ಖಂಡ್ರೆ

300x250 AD

ಕಾರವಾರ: 2015ಕ್ಕೆ ಮೊದಲು ತಮ್ಮ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಬಡ ಜನರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೊಸದಾಗಿ ಒತ್ತುವರಿ ಮಾಡುವವರಿಗೆ ಅವಕಾಶ ನೀಡುವುದಿಲ್ಲ ಆದರೆ ದೊಡ್ಡ ಒತ್ತುವರಿ ತೆರವು ಮಾಡಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದರು.
ಅವರು ದಾಂಡೇಲಿಯಲ್ಲಿ ನಡೆದ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಹಾಕಿರುವವರ ಯಾವುದೇ ಅರ್ಜಿ ಪುನರ್ ಪರಿಶೀಲನೆಯಲ್ಲಿದ್ದರೆ ಅಂತಹವರ ಒತ್ತುವರಿ ತೆರವು ಮಾಡಿಸದಂತೆ ಸೂಚಿಸಲಾಗಿದೆ. ಜೊತೆಗೆ ರಾಜ್ಯ ಸರ್ಕಾರ ಕಳೆದ ವಿಧಾನಮಂಡಳದ ಅಧಿವೇಶನದಲ್ಲಿ ಅರಣ್ಯ ಹಕ್ಕು ಕಾಯಿದೆ ಜಾರಿಗೆ 25 ವರ್ಷಕ್ಕಿಂತ ಹಿಂದೆ ಅರಣ್ಯದಲ್ಲಿದ್ದವರಿಗೆ ಹಕ್ಕು ನೀಡಬೇಕು ಎಂದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದರು.
ಹಾವು ಕಚ್ಚಿ ಸಾವನ್ನಪ್ಪುವವರಿಗೆ ಹೆಚ್ಚಿನ ಪರಿಹಾರ ನೀಡುವ ಕುರಿತಂತೆ ಸಾರ್ವಜನಿಕರಿಂದ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಬೇಡಿಕೆ ಇದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಕಾಡು ಹಂದಿ, ನವಿಲುಗಳಿಂದ ಆಗುತ್ತಿರುವ ಬೆಳೆ ಹಾನಿಯ ಪರಿಹಾರ ಹೆಚ್ಚಳ ಮಾಡಬೇಕು, ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂಬ ಬೇಡಿಕೆ ರೈತರಿಂದ ಬಂದಿದೆ. ಈ ಕುರಿತಂತೆ ಒಂದು ಸಮಿತಿ ಮಾಡಿ ವರದಿ ಬಂದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
7-8 ದಶಕಗಳ ಹಿಂದೆ ಕೆಲವರು ವನ್ಯ ಜೀವಿಗಳನ್ನು ಕೊಂದು, ಸತ್ತ ಪ್ರಾಣಿಯ ಜೊತೆ ಫೋಟೋ ತೆಗೆಸಿಕೊಂಡು ಮನೆಯಲ್ಲಿ ತೂಗುಹಾಕುತ್ತಿದ್ದರು. ಮೋಜಿಗಾಗಿ ಬೇಟೆ ಆಡುತ್ತಿದ್ದರು. ಆದರೆ 1972ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಜಾರಿಗೆ ತಂದ ಬಳಿಕ ಇಂತಹ ಬೇಟೆ, ಕಳ್ಳಬೇಟೆ ನಿಗ್ರಹವಾಗಿದೆ ಎಂದರು.
ಭೂಮಿಗೆ ಕಾಡು ಭೂಷಣ, ಕಾಡಿಗೆ ವನ್ಯ ಜೀವಿ, ಸಸ್ಯ ಸಂಕುಲವೇ ಭೂಷಣ. ಇಂತಹ ವನ, ವನ್ಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಮನುಷ್ಯನಿಗೆ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಮಾನವನ ಬದುಕಿಗೆ ಆಧಾರವಾಗಿರುವ ಅರಣ್ಯ ನಾಶ, ಒತ್ತುವರಿ ಮಾಡಬಾರದು . ಇಡೀ ದೇಶದ ಹವಾಮಾನದ ಮೇಲೆ ಪರಿಣಾಮಬೀರಿ, ಮಳೆ ಉತ್ತಮವಾಗಿ ಬೀಳಲು ಪಶ್ಚಿಮಘಟ್ಟಗಳನ್ನು ಎಲ್ಲರೂ ಜತನವಾಗಿ ಕಾಪಾಡಿ ಮುಂದಿನ ಪೀಳಿಗೆಗೆ ನೀಡಬೇಕು ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ.80ರಷ್ಟ್ಟು ಅರಣ್ಯವಿದೆ. ವನ, ವನ್ಯಜೀವಿಗಳ ಜೊತೆ ಸಹಬಾಳ್ವೆ ನಡೆಸುವುದರಲ್ಲಿ ಈ ಜಿಲ್ಲೆಯ ಜನರ ಪಾತ್ರ ಮಹತ್ವದ್ದಾಗಿದ್ದು, ಇಷ್ಟು ಬೃಹತ್ ಪ್ರಮಾಣದಲ್ಲಿ ಅರಣ್ಯ ಸಂರಕ್ಷಣೆ ಮಾಡಿರುವ ಎಲ್ಲರೂ ಅಭಿನಂದನಾರ್ಹರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಹಸಿರೇ ಕಾಣುತ್ತದೆ. ಪಶ್ಚಿಮಘಟ್ಟದ ಸುಂದರ ತಾಣದಲ್ಲಿರುವ ಜಿಲ್ಲೆಯ ಜನರು ಪುಣ್ಯವಂತರು ಎಂದರು.
ನಮ್ಮ ಭೂಗ್ರಹಕ್ಕೆ ವಸುಂಧರೆ ಎನ್ನುವ ಹೆಸರಿದೆ. ಅಂದರೆ ಚಿನ್ನ, ರತ್ನ, ವಜ್ರ, ವೈಢೂರ್ಯಗಳನ್ನು ಹೊಂದಿರುವವಳು ಎಂದರ್ಥ. ಈ ಭೂಮಿ ರತ್ನಗರ್ಭವಷ್ಟೇ ಅಲ್ಲ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಕೀಟ ಸಂಕುಲ, ಮಾನವ ಸಂಕುಲಕ್ಕೂ ಆಶ್ರಯಧಾತೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಹತ್ತಾರು ಎಕರೆ ಒತ್ತುವರಿ ಮಾಡಿದವರು ಯಾರೂ ಇಲ್ಲ. ಜೀವಿನೋಪಾಯಕ್ಕೆ 1 ಎಕರೆ ಅರಣ್ಯ ಜಮೀನು ಒತ್ತುವರಿ ಮಾಡಿದ ಬಡವರಿದ್ದಾರೆ. ಅವರ ಜೀವನೋಪಾಯಕ್ಕೆ ತೊಂದರೆ ನೀಡದಂತೆ ಕ್ರಮವಹಿಸಬೇಕು. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದ ಸರ್ಕಾರಕ್ಕೆ ಮತ್ತು ಅರಣ್ಯ ಸಚಿವರಿಗೆ ಧನ್ಯವಾದ ಅರ್ಪಿಸಿದ ಅವರು, ನಮ್ಮ ಭಾಗದಲ್ಲಿ ಶೇ.80ರಷ್ಟ್ಟ ಅರಣ್ಯಪ್ರದೇಶವಿದ್ದು, ನಮ್ಮ ಜನರೇ ಇದನ್ನು ಸಂರಕ್ಷಿಸಿದ್ದಾರೆ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅವಿದ್ಯಾವಂತರಾದ 75 ಸಾವಿರಕ್ಕೂ ಹೆಚ್ಚು ಜನರು ಅರಣ್ಯದಲ್ಲೇ ವಾಸಿಸುತ್ತಿದ್ದಾರೆ. ಅವರು ಹಲವು ದಶಕಗಳಿಂದ ಅರಣ್ಯದಲ್ಲೇ ಬದುಕಿದ್ದಾರೆ. ಉತ್ತರ ಕನ್ನಡ ಜಿಲ್ಲೆಯನ್ನು ಇತರ ಜಿಲ್ಲೆಯಂತೆ ನೋಡಬಾರದು. ನಮ್ಮ ಬಡ ಜನರಿಗೆ ನ್ಯಾಯ ದೊರಕಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ-ಕಾಲೇಜು ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇದಕ್ಕೂ ಮುನ್ನ ಸಚಿವರು , ಅನುಮೋದಿತ ಕಾರ್ಯಯೋಜನೆಯ ಪ್ರಕಾರ ಅರಣ್ಯ ಪ್ರದೇಶಗಳ ಸತ್ತ ಮತ್ತು ಬಿದ್ದ ಮರವನ್ನು ಹೊರತೆಗೆಯುವ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಬಳಿಕ ದಾಂಡೇಲಿಯ ಸರ್ಕಾರಿ ಟಿಂಬರ್ ಡಿಪೋದಲ್ಲಿ ನಾಟಾ ಸಂಗ್ರಹ ಮತ್ತು ಇ-ಹರಾಜು ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ್ ರೆಡ್ಡಿ ,ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಶಾಂತ್ ಕುಮಾರ್, ರವಿಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top