ಭಟ್ಕಳ: ಜಿಲ್ಲೆ ಹಾಗೂ ಭಟ್ಕಳದಲ್ಲಿ ಮರಳು ಸಮಸ್ಯೆ ತಲೆದೋರಲು ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮರಳನ್ನು ಉದ್ಯಮವನ್ನಾಗಿ ಮಾಡುವ ಉದ್ದೇಶ ಹೊಂದಿದ್ದಾರೆ. ನನ್ನ ಅವಧಿಯಲ್ಲಿಯು ಸಹ ಹಸಿರು ಪೀಠದ ನ್ಯಾಯಾಲಯದಲ್ಲಿ ವಿಚಾರಣೆ ಇರುವಾಗಲೇ ಮೂವರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಸಾಂಪ್ರದಾಯಿಕ ಮರಳುಗಾರಿಕೆ ಮೂಲಕ ತಾಲೂಕಿಗೆ ರೇತಿ ಸಿಗುವಂತಹ ಕೆಲಸ ಮಾಡಿದ್ದೇನೆ. ಆದರೆ ಸಚಿವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ, ಇದಕ್ಕೆ ಅವರೇ ಉತ್ತರ ಕೊಡಬೇಕು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪ ಮಾಡಿದ್ದಾರೆ.
ಅವರು ಬುಧವಾರದಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ರೇತಿ ಅಭಾವಕ್ಕೆ ಬಿಜೆಪಿ ನೇರ ಕಾರಣ ಎಂದು ಕಾಂಗ್ರೆಸ್ ಮಾಡಿದ ಆರೋಪದ ವಿರುದ್ಧವಾಗಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕಳೆದ ಒಂದು ವರ್ಷದಿಂದ ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಮರಳಿನ ಸಮಸ್ಯೆ ಎದುರಿಸುತ್ತಿರುವ ವಿಚಾರದಲ್ಲಿ ಸ್ಪಷ್ಟೀಕರಣ ನೀಡಿ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಕೂಲಂಕುಷವಾಗಿ ಚರ್ಚೆ ಮಾಡಿ ಇದಕ್ಕೆ ನ್ಯಾಯ ಕೊಡುವ ಉದ್ದೇಶ ಬಿಜೆಪಿಯದ್ದಾಗಿದೆ.
ಇದರಿಂದ ರಾಜಕಾರಣ ಮಾಡಬೇಕು ಎನ್ನುವ ಉದ್ದೇಶ ನಮಗಿಲ್ಲ. ಒಂದು ವರ್ಷದಿಂದ ರೇತಿಯ ಸಮಸ್ಯೆ ಎದುರಾಗಿದೆ. ಆದರೆ ನಾವು ಇದೇ ಮೊದಲು ಬಾರಿಗೆ ಸುದ್ದಿಗೋಷ್ಠಿ ಕರೆದಿದ್ದೇವೆ. ಈಗ ಅವರದ್ದೆ ಸರಕಾರ ಅವರದ್ದೇ ಉಸ್ತುವಾರಿ ಸಚಿವರಿದ್ದಾರೆ. ಸರಕಾರ ನಡೆಸುತ್ತಿರುವವರೇ ಬಂದು ಮಾಧ್ಯಮದ ಎದುರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರ ನಡೆಸುತ್ತಿರುವವರೇ ತಮ್ಮ ಅಳಲನ್ನು ಹೇಳಿಕೊಳ್ಳುತ್ತಿರುವುದು ನೋಡಿದರೆ ಬಹಳ ಮುಜುಗರ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು.
ನೀತಿ ನಿಯಮಗಳನ್ನು ಮಾಡುವುದು ಸರ್ಕಾರ. ನಾನು ಕೂಡ 5 ವರ್ಷಗಳ ಕಾಲ ಶಾಸಕನಾಗಿದ್ದೆ. ನಾವು ಯಾವತ್ತಿಗೂ ಸರ್ಕಾರ ಇದ್ದ ವೇಳೆ ನಮ್ಮ ಅಭಿವೃದ್ಧಿ ಕೆಲಸವನ್ನು ಮಾಧ್ಯಮದ ಮುಂದೆ ಹೇಳಿದ್ದೇವೆ ವಿನಹಃ ನಮ್ಮ ಕಷ್ಟಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ತಮ್ಮ ಕೈಯಲ್ಲಿ ಅಧಿಕಾರ ಇಟ್ಟುಕೊಂಡು ಕಪಟ ನಾಟಕವನ್ನಾಡಿದ್ದಾರೆ. ಸಚಿವರು ಅವರ ಕಪಟ ನಾಟಕವನ್ನು ಬ್ಲಾಕ್ ಅಧ್ಯಕ್ಷರ ಮೂಲಕ ಮಾಡಿಸಿದ್ದಾರೆ ಎಂದು ಕಿಡಿಕಾರಿದರು.
ಈಗಿನ ಉಸ್ತುವಾರಿ ಸಚಿವರು ಈ ಮೊದಲು ಶಾಸಕರಾಗಿದ್ದ ಅವಧಿಯಲ್ಲು ಸಹ ಮರಳಿನ ಸಮಸ್ಯೆ ಇದ್ದು ಈಗಾಲು ಮತ್ತೆ ಇವರ ಅವಧಿಯಲ್ಲಿಯೇ ಮರಳಿನ ಸಮಸ್ಯೆ ಎದುರಾಗಿದೆ. ನನ್ನ ಅವಧಿಯಲ್ಲಿ ತಲೆದೋರದ ಮರಳು ಸಮಸ್ಯೆ ಅವರ ಎರಡು ಅವಧಿಯಲ್ಲಿಯೂ ಮರಳು ಸಮಸ್ಯೆ ಯಾಕೆ ಬರುತ್ತದೆ. 2018 ರಿಂದ 2023 ತನಕ ನಾನು ಶಾಸಕನಿದ್ದ ವೇಳೆ ಯಾವುದೇ ಸಮಸ್ಯೆ ಎದುರಾಗಿಲ್ಲ.
ಭಟ್ಕಳ ಸರ್ಕಲ್‌ನಿಂದ ರಂಗಿನಕಟ್ಟೆ ತನಕ 25 ರಿಂದ 30 ಮರಳು ಲಾರಿಗಳು ನಿಂತುಕೊಂಡಿರುತ್ತಿತ್ತು. ಕೇವಲ 8 ರಿಂದ 9 ಸಾವಿರಕ್ಕೆ ಮರಳು ಬಡವರಿಗೆ ಸಿಗುವಂತೆ ಒಬ್ಬ ಶಾಸಕನಾಗಿ ನಾನು ಮಾಡಿದ್ದೇನೆ. ಸಾವಿರಾರು ಕುಟುಂಬಗಳು ಮರಳನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ. ನನ್ನ ಅವಧಿಯಲ್ಲಿ ಜನಪರ ಕೆಲಸಕ್ಕೆ ತೊಡಕುಮಾಡಿಲ್ಲ. ಆದರೆ ಸಚಿವರು ಮರಳುಗಾರಿಕೆಯನ್ನು ಉದ್ಯಮವನ್ನಾಗಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದಾರೆ ಎಂದು ಆರೋಪ ಮಾಡಿದರು.
ನನ್ನ ಅವಧಿಯಲ್ಲಿಯು ಸಹ ಹಸಿರು ಪೀಠದ ನ್ಯಾಯಾಲಯಕ್ಕೆ ಉಡುಪಿಯ ಓರ್ವರು ದೂರು ಸಲ್ಲಿಸಿದ್ದರು. ಆದರೆ ನಾನು ಅಂದಿನ ಸಚಿವ ಸಿ.ಸಿ.ಪಾಟಿಲ್ ಅವರ ಅಧ್ಯಕ್ಷತೆಯಲ್ಲಿ ನಮ್ಮಲ್ಲಿನ ಸಾಂಪ್ರದಾಯಿಕ ರೇತಿ ನೀಡುವಲ್ಲಿ ಅಂದಿನ ಅವಧಿಯಲ್ಲಿ ಕಾರವಾರ, ಉಡುಪಿ, ಮಂಗಳೂರು ಮೂವರು ಜಿಲ್ಲಾಧಿಕಾರಿಗಳ ಸಹಿತ ಸಚಿವರ ಜೊತೆಗೆ ತೆರಳಿ ಸಭೆ ಮಾಡಿ ಜನರಿಗೆ ರೇತಿ ಸಿಗುವಂತೆ ಮಾಡಿದ್ದೇನೆ. ಆದರೆ ಈ ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದ್ದೆ. ನನಗೆ ರಾಜಕಾರಣ ಮಾಡುವ ಉದ್ದೇಶವಿಲ್ಲ. ಜನರಿಗೆ ರೇತಿ ಲಭ್ಯವಾಗಬೇಕು. ಜನ ಸಾಮಾನ್ಯರು ತುಂಬಾ ಸಂಕಷ್ಟದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಅವರು ಬೇರೆಯವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಯಾರಿಗೂ ರೇತಿ ಸಿಗುತ್ತಿಲ್ಲ. ಒಬ್ಬ ಮಾಜಿ ಶಾಸಕನಾಗಿ ನನಗೆ ರೇತಿ ಸಿಗುತ್ತಿಲ್ಲ. ಹೀಗಿರುವಾಗ ಸಾಮಾನ್ಯ ಜನರು ಎಷ್ಟು ಪರದಾಡುತ್ತಿದ್ದಾರೆ ಎಂದು ನೀವೇ ಮನವರಿಕೆ ಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ನಿಮಗೆ ವಿನಂತಿ ಮಾಡಿಕೊಳ್ಳುತ್ತೇನೆ. ನಿಮ್ಮ ಜೊತೆ ನಾನು ಕೈಜೋಡಿಸುತ್ತೇನೆ. ದಯವಿಟ್ಟು ಈ ರೇತಿ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿ ಇದಕ್ಕೊಂದು ನ್ಯಾಯಕೊಡಿಸುವ ಕೆಲಸ ಮಾಡಬೇಕು. ಮೊದಲು ಬೇರೆ ಪಕ್ಷದ ಮೇಲೆ ಮಾಡುವ ಆರೋಪ ಬಿಡಬೇಕು. ಸೂಕ್ತ ನಿಯಮಗಳನ್ನು ಮಾಡುವ ನೀವೇ ಈ ರೀತಿ ಹಿಂದೇಟು ಹಾಕುತ್ತಿರುವುದನ್ನು ನೋಡಿದರೆ ಜಿಲ್ಲೆಯ ಹಾಗೂ ತಾಲೂಕಿನ ಜನತೆಗೆ ಮೋಸ ಮಾಡುತ್ತಿದ್ದೀರಾ ಎಂದು ನೇರವಾಗಿ ಹೇಳುತ್ತೇನೆ ಎಂದರು.
ನನ್ನ ಅವಧಿಯಲ್ಲಿ ಶೇ.90 ರಷ್ಟು ನಿಮ್ಮ ಪಕ್ಷದ ಕಾರ್ಯಕರ್ತರಿಗೆ ರೇತಿ ಪರ್ಮಿಟ್‌ಗೆ ಅವಕಾಶ ನೀಡಿದ್ದೇನೆ. ನಾನು ಎಲ್ಲಿಯೂ ಸಹ ರೇತಿ ನಿಲ್ಲಿಸುವ ಕೆಲಸ ಮಾಡಿಲ್ಲ. ಸಚಿವರೇ ನೀವು ರಾಜಕಾರಣ ಉದ್ದೇಶ ಇದ್ದರೆ ಮಾಡಿ ಆದರೆ ಜನರ ರಕ್ತ ಹೀರುವ ಕೆಲಸ ಮಾಡುತ್ತಿದ್ದಾರೆ. ಅದನ್ನು ನೀವು ನಿಲ್ಲಿಸಬೇಕು. ಎಲ್ಲೆಲ್ಲೋ ಸಭೆಯನ್ನು ಮಾಡಿ ಬೆಂಗಳೂರಿನಲ್ಲಿ ಕುಳಿತುಕೊಳ್ಳುವುದಲ್ಲ. ಜನರ ಸಮಸ್ಯೆ ಅರಿಯಬೇಕಾದರೆ ಕ್ಷೇತ್ರದಲ್ಲಿ ಇರುವಂತಹ ಕೆಲಸ ಮಾಡಿ. ಆಗ ತಾಲೂಕಿನಲ್ಲಿರುವ ಸಮಸ್ಯೆ ಬಗ್ಗೆ ನಿಮಗೆ ಅರಿವಾಗುತ್ತದೆ. ನಿಮಗೂ ಕೂಡ ಕಷ್ಟಗಳ ಬಗ್ಗೆ ಅರಿವಾಗಬೇಕಾದರೆ ತಿಂಗಳಲ್ಲಿ 25 ದಿನಗಳ ಕಾಲ ನಮ್ಮ ಕ್ಷೇತ್ರದಲ್ಲಿ ಇರುವಂತಹ ಕೆಲಸ ಮಾಡಿ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಿ ಇಲ್ಲವಾದರೆ
ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರಳಿ. ಆಗ ಓರ್ವ ಮಾಜಿ ಶಾಸಕನಾಗಿ ಪರಿಹಾರ ಮಾಡುವಂತಹ ಕೆಲಸ ನಾನು ಮಾಡುತ್ತೇನೆ ಎಂದು ಸವಾಲು ಹಾಕಿದರು.
“ಹಸಿರು ಪೀಠದಲ್ಲಿ ದೂರು ದಾಖಲಿಸಲು ಕಾಂಗ್ರೆಸ ಅವರಿಂದಲೇ ಪುಷ್ಟಿ- ಸಹಕಾರ”
ಬಿಜೆಪಿಯರು ಹಸಿರು ಪೀಠಕ್ಕೆ ಹೋಗಿದ್ದಾರೆ ಎಂದು ಆರೋಪ ಮಾಡುತ್ತಿರುವ ಬ್ಲಾಕ್ ಕಾಂಗ್ರೆಸನ ಅಧ್ಯಕ್ಷರುಗಳು ಆ 11 ಜನರಿಗೆ ಬೆನ್ನೆಲುಬಾಗಿ ನಿಂತು ಹಣವನ್ನು ಕೊಟ್ಟು ಎಲ್ಲಾ ಸಹಕಾರ ಕೊಟ್ಟಿರುವುದು ಇದೇ ನಿಮ್ಮ ಕಾಂಗ್ರೆಸ್ ಮುಖಂಡರೇ ಹೊರತು ನಮ್ಮ ಬಿಜೆಪಿಯವರಲ್ಲ. ಇದಕ್ಕೆ ನಿಮ್ಮವರೇ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
“ಶರಾವತಿ ನದಿ ಎಡ-ಬಲ ದಂಡೆಯಲ್ಲಿದೇ ಸಚಿವರ ಜಾಗ “
ಹೊನ್ನಾವರದ ಶರಾವತಿ ನದಿಯ ಎಡ ಮತ್ತು ಬಲ ದಂಡೆ ಭಾಗದಲ್ಲಿ ನನ್ನದು ಒಂದು ಜಾಗವಿಲ್ಲ. ಆದರೆ ಸಚಿವರ ಜಾಗ ಆ ಭಾಗದಲ್ಲಿ ಸಾಕಷ್ಟಿದೆ. ಅದೇ ರೀತಿ ಅವರದ್ದೇ ರೇತಿ ದಿಬ್ಬೆಗಳು ಎಷ್ಟಿದೆ ಎಂದು ಮಾಧ್ಯಮದವರೇ ಸಚಿವರಿಗೆ ಪ್ರಶ್ನೆ ಮಾಡಿ ಎಂದು ಹೇಳಿದರು. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆ ಹರಿಸಿ ಇದಕ್ಕೆ ಇತಿಶ್ರೀ ಹಾಡಿ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಹಾಗೂ ಶ್ರೀಧರ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಪ್ರಕೊಷ್ಟ ಸಹಸಂಚಾಲ ಮೋಹನ ನಾಯ್ಕ, ಭಾಸ್ಕರ ದೈಮನೆ, ಉದಯ ದೇವಾಡಿಗ ಹಾಗೂ ಮುಂತಾದವರು ಉಪಸ್ಥಿತರಿದ್ದರು.