ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ವತಿಯಿಂದ ಬೆಳೆರಕ್ಷಣೆ ಕ್ರಮಕ್ಕಾಗಿ ಆಗ್ರಹ
ಹೊನ್ನಾವರ : ತೋಟ-ಗದ್ದೆಗಳಿಗೆ ಕಾಡುಪ್ರಾಣಿ ಹಾಗೂ ಮಂಗಗಳ ಉಪಟಳ ತಡೆಗಟ್ಟುವ ಕ್ರಮದ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ತಿಂಗಳೊಳಗೆ ರೈತರ ಸಭೆ ಕರೆದು ಕ್ರಮಕೈಗೊಳ್ಳದಿದ್ದರೆ ಹೊನ್ನಾವರ ಉಳಿಸಿ ಬೆಳೆಸಿ ಜನಪರ ವೇದಿಕೆ ವತಿಯಿಂದ ರೈತರೊಡಗೂಡಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಜಿ. ಎನ್. ಗೌಡ ಕೊಡಾಣಿ ಹಾಗೂ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನಲ್ಲಿ ಕಾಡುಪ್ರಾಣಿ ಹಾಗೂ ಮಂಗಗಳ ಹಾವಳಿಯಿಂದ ತೆಂಗು, ಬಾಳೆ, ಅಡಿಕೆ, ಭತ್ತ, ತರಕಾರಿ ಮುಂತಾದ ಬೆಳೆಗಳು ನಾಶವಾಗುತ್ತಿವೆ. ಮುಳ್ಳುಹಂದಿ, ಕಾಡುಹಂದಿ, ಮಂಗಗಳ ಹಾವಳಿ ಮಿತಿಮೀರಿದೆ. ಚಿರತೆ ಹಾವಳಿಯೂ ಹೆಚ್ಚಾಗಿದೆ. ಮಂಗಗಳು ತೆಂಗಿನ ಕಾಯಿ ಬೆಳೆಯುವುದರೊಳಗೆ ಮರದ ಮೇಲೆಯೇ ತಿಂದುಹಾಕುತ್ತವೆ. ಬಾಳೆಕೊನೆ ಬೆಳೆಯಲು ಬಿಡುವುದೇ ಇಲ್ಲ. ಹಂದಿಗಳು ಗಿಡಗಳ ಬುಡವನ್ನೇ ಅಗೆದು ನಾಶ ಪಡಿಸುತ್ತಿವೆ. ಇದರಿಂದಾಗಿ ತಾಲೂಕಿನಲ್ಲಿ ಕೋಟ್ಯಾಂತರ ರೂ.ಗಳ ಬೆಳೆ ನಷ್ಟವಾಗುತ್ತಿದೆ. ರೈತರ ಬೆಳೆಗಳಿಗೆ ಕಾಡು ಪ್ರಾಣಿ ಉಪಟಳದಿಂದ ಹೈರಾಣವಾಗಿದ್ದು, ಬೆಳೆ ರಕ್ಷಣೆಗೆ ಕಷ್ಟ ಪಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳ ಹಾಗೂ ಮಂಗಗಳ ನಿಯಂತ್ರಣಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ವೇದಿಕೆಯ ಅಧ್ಯಕ್ಷ ಜಿ.ಎನ್. ಗೌಡ ಕೊಡಾಣಿ, ಗೌರವ ಕಾರ್ಯಾಧ್ಯಕ್ಷ ವಿ.ಎನ್. ಭಟ್ ಅಳ್ಳಂಕಿ, ಸಲಹೆಗಾರ ಜಿ.ಎಚ್.ನಾಯ್ಕ, ಉಪಾಧ್ಯಕ್ಷ ಎಂ.ಆರ್.ಹೆಗಡೆ, ಯೋಗೇಶ ರಾಯಕರ, ಬಾಬಾ ಪಕಿ ಮಸ್ತಾನ, ಕಾರ್ಯದರ್ಶಿ ಪ್ರಭು ಪಟಗಾರ ಮತ್ತಿತರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.