ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಮಂಗಳವಾರ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಸಲುವಾಗಿ ನಾಯ್ಕನಕೆರೆ ಬಳಿ ಇರುವ ಶ್ರೀ ರಾಘವೇಂದ್ರ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ನಿವಾಸಿಗಳಿಗೆ ದಿನಬಳಕೆಯ ಅಗತ್ಯ ಸಾಮಗ್ರಿಗಳನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲ ಆರ್.ಡಿ. ಜನಾರ್ಧನ ಈ ವೇಳೆ ಮಾತನ್ನಾಡಿ, “ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಆಶ್ರಮ ನಿವಾಸಿಗಳ ಜೊತೆ ಬೆರೆಯುವ ಮೂಲಕ ಅವರೊಂದಿಗೆ ಸಂತಸವನ್ನು ಹಂಚಿಕೊಳ್ಳುವ ಮೂಲಕ ಸಮಾಜಕ್ಕೆ ಮಿಡಿಯುವ ಮನಸ್ಸನ್ನು ಹೊಂದಬೇಕು” ಎಂದರು.
ರೆಡ್ ಕ್ರಾಸ್ ಘಟಕದ ಸಂಚಾಲಕ ಶರತ ಕುಮಾರ, ವಿಶೇಷ ಚೇತನ ಮಕ್ಕಳ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಪ್ಪ, ಉಪನ್ಯಾಸಕರಾದ ಮೊಹಮ್ಮದ್ ಅಸ್ಲಂ ಖಾನ್, ನಿತೇಶ ಡಿ. ಮೋರೆ, ಭಾಗವಹಿಸಿದ್ದರು.
ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಹಾಡು ನೃತ್ಯ ಹಾಗೂ ಏಕಪಾತ್ರ ಅಭಿನಯದ ಮೂಲಕ ಆಶ್ರಮವಾಸಿಗಳನ್ನು ರಂಜಿಸಿದರು.