Slide
Slide
Slide
previous arrow
next arrow

ದಾಂಡೇಲಿಯಲ್ಲಿ “ಮಾಧ್ಯಮ ಮತ್ತು ಯುವ ಜನತೆ” ವಿಚಾರ ಸಂಕಿರಣ

300x250 AD

ದಾಂಡೇಲಿ : ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ನಿಮಿತ್ತವಾಗಿ, ಕಾರ್ಯನಿರತ ಪತ್ರಕರ್ತರ ಸಂಘ ದಾಂಡೇಲಿ ( ದಾಂಡೇಲಿ ಪ್ರೆಸ್ ಕ್ಲಬ್ ಸಂಯೋಜಿತ) ಆಶ್ರಯದಡಿ‌ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿ ಮತ್ತು ಸ.ಪ್ರ.ದರ್ಜೆ ಕಾಲೇಜು, ಅಂಬೇವಾಡಿ, ದಾಂಡೇಲಿ ಇವರ ಸಹಭಾಗಿತ್ವದಲ್ಲಿ ಸ.ಪ್ರ.ದರ್ಜೆ ಕಾಲೇಜು ಸಭಾಭವನದಲ್ಲಿ “ಮಾಧ್ಯಮ ಮತ್ತು ಯುವ ಜನತೆ” ವಿಚಾರ ಸಂಕಿರಣ ಕಾರ್ಯಕ್ರಮವು ಮಂಗಳವಾರ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ ಶೇಖ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಮಾಧ್ಯಮ ಕ್ಷೇತ್ರದ ಬಗ್ಗೆ ಯುವ ಜನತೆ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕು ಎಂದು ಕರೆ ನೀಡಿದರು. ನಗರದ ಅಭಿವೃದ್ಧಿಗೆ ಇಲ್ಲಿಯ ಪತ್ರಕರ್ತರು ನೀಡುತ್ತಿರುವ ಸಹಕಾರವನ್ನು ಸ್ಮರಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರ ಸಭೆಯ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳದೆ ಯುವ ಜನತೆ ಅದನ್ನು ಸಮಾಜಕ್ಕೆ ಉಪಯುಕ್ತವಾಗುವ ನಿಟ್ಟಿನಲ್ಲಿ ಸದ್ಬಳಕೆ ಮಾಡಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸುಬ್ರಾಯ ಭಟ್ ಬಕ್ಕಳ, ಒಂದು ಪತ್ರಿಕೆಯ ಬೆಳವಣಿಗೆಯಲ್ಲಿ ವರದಿಯ ಜೊತೆ ಜೊತೆಗೆ ವಿಶ್ಲೇಷಣಾ ವರದಿಗಳು, ತನಿಖಾ ವರದಿಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸುದ್ದಿ ಕೊಡುವ ಧಾವಂತದಲ್ಲಿ ಸುದ್ದಿಗಳ ನೈಜತೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಯುವ ಜನತೆ ಹೆಚ್ಚು ಹೆಚ್ಚು ಓದುವುದನ್ನು ರೂಢಿಕೊಳ್ಳಬೇಕು. ಪ್ರತಿದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮೈಗೂಡಿಸಿಕೊಂಡಲ್ಲಿ ಜ್ಞಾನಮಟ್ಟ ಸುಧಾರಣೆಯಾಗಲು ಸಾಧ್ಯ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಬಸವರಾಜ ಪಾಟೀಲ್ ಅವರು ಪತ್ರಕರ್ತರು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಜೋಯಿಡಾ, ದಾಂಡೇಲಿ ಭಾಗದಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯಗಳು ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಖಂಡಿಸುತ್ತೇವೆ. ಪತ್ರಕರ್ತರ ರಕ್ಷಣೆಗೂ ಸಂಬಂಧಪಟ್ಟವರು ಆದ್ಯತೆಯನ್ನು ನೀಡಬೇಕು ಎಂದರು.

300x250 AD

ಕಾರ್ಯಕ್ರಮದಲ್ಲಿ “ಮಾಧ್ಯಮ ಮತ್ತು ಯುವ ಜನತೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಹಾಗೂ ಸ.ಪ್ರ.ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವಿನಯಾ.ಜಿ.ನಾಯಕ ಅವರು ಮಾಧ್ಯಮ ಇಂದು ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಸಾಮಾಜಿಕ ಜಾಲತಾಣಗಳು ಮಹತ್ವ ಪಡೆಯುತ್ತಿವೆ. ಮಾಧ್ಯಮಗಳು ಕೂಡ ಉದ್ಯಮವಾಗಿ ಬದಲಾಗುತ್ತಿದೆ. ಅನೇಕ ಋಣಾತ್ಮಕ ಸಂಗತಿಗಳು ಮಾಧ್ಯಮ ಲೋಕವನ್ನು ಇಂದು ಆವರಿಸಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಅವಲಂಬನೆಯಿಂದ ಓದುವ ಮತ್ತು ಬರವಣಿಗೆಯ ಪ್ರವೃತ್ತಿಯಿಂದ ಯುವ ಜನತೆ ವಿಮುಖರಾಗುತ್ತಿರುವುದು ದುರದೃಷ್ಟಕರವಾದ ಸಂಗತಿ ಎಂದರು. ಎಲ್ಲಿಯವರೆಗೆ ನಮ್ಮಲ್ಲಿ ಪ್ರಶ್ನಿಸುವ ಮನೋಭಾವನೆ ನಮ್ಮಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಸಮಾಜದ ಸುಧಾರಣೆ ಕಷ್ಟ ಸಾಧ್ಯ. ಮಾಧ್ಯಮ ಇಂದು ಉದ್ಯಮವಾಗಿ ಬೆಳೆಯುತ್ತಿರುವುದರಿಂದ ಅನೇಕ ಸತ್ಯಗಳು ಹೊರ ಜಗತ್ತಿಗೆ ಬಾರದಂತಾಗಿದೆ. ಮಾಧ್ಯಮ ಸಮಾಜವನ್ನು ಸುಧಾರಿಸುವ ಹಾಗೂ ಸದೃಢ ಸಮಾಜವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸಬೇಕು. ಯುವ ಜನತೆ ಮಾಧ್ಯಮ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸಬೇಕು. ಆತ್ಮವಿಶ್ವಾಸ ಮತ್ತು ಧೈರ್ಯದ ಜೊತೆಯಲ್ಲಿ ಭಾಷಾ ಪಾಂಡಿತ್ಯ ಮತ್ತು ಉತ್ತಮ ಬರವಣಿಗೆಯನ್ನು ಮೈಗೂಡಿಸಿಕೊಂಡಾಗ ಉತ್ತಮ ಪತ್ರಕರ್ತನಾಗಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿನ ಈ ವಿಚಾರ ಸಂಕೀರ್ಣ ಯುವಜನತೆಗೆ ಸ್ಪೂರ್ತಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎಂ ಡಿ.ಒಕ್ಕುಂದ ಅವರು ಇಡೀ ಸಮಾಜಕ್ಕೆ ಬೆಳಕು ನೀಡುವ ನಿಟ್ಟಿನಲ್ಲಿ ಸದಾ ಶ್ರಮಿಸುವ ಪತ್ರಕರ್ತರ ಬದುಕು ದೀಪದ ಬುಡದಲ್ಲಿ ಕತ್ತಲೆ ಎಂಬಂತಿದೆ. ಪತ್ರಕರ್ತರ ಸ್ಥಿತಿಗತಿಗಳ ಬಗ್ಗೆಯೂ ಚಿಂತನೆ ಆಗಬೇಕಾಗಿದೆ. ಸಮಾಜದ ನೋವನ್ನು ತನ್ನ ನೋವೆಂದು ಅರಿತುಕೊಳ್ಳುವ ಪತ್ರಕರ್ತರದ್ದು ಅಭದ್ರತೆಯ ಜೀವನ ಎಂದರು. ಇಡೀ ಸರಕಾರವನ್ನೇ ಬುಡಮೇಲಾಗಿಸುವ ಸಾಮರ್ಥ್ಯ ಮಾಧ್ಯಮ ಕ್ಷೇತ್ರಕ್ಕೆ ಇರುವುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆಯ ನೂತನ ಅಧ್ಯಕ್ಷರಾದ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಸುಬ್ರಾಯ ಭಟ್ ಬಕ್ಕಳ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ್ ಮತ್ತು ಸಾಹಿತಿ ಹಾಗೂ ವಾಗ್ಮಿ ಡಾ.ವಿನಯಾ.ಜಿ.ನಾಯಕ‌ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಸಂಘದ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ಸ್ವಾಗತಿಸಿದರು. ಅಧ್ಯಕ್ಷರಾದ ಸಂದೇಶ್ ಎಸ್.ಜೈನ್ ಪ್ರಾಸ್ತಾವಿಕ ಮಾತನಾಡಿದರು. ಸದಸ್ಯ ಪ್ರವೀಣ್ ಸುಲಾಖೆ ವಂದಿಸಿದರು. ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯ ಸದಸ್ಯರಾದ ಯು.ಎಸ್. ಪಾಟೀಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಘದ ಖಜಾಂಚಿ ಅಕ್ಷಯಗಿರಿ ಗೋಸಾವಿ ಹಾಗೂ ಸದಸ್ಯರಾದ ಅಪ್ತಾಬ್ ಶೇಖ ಸಹಕರಿಸಿದರು.

Share This
300x250 AD
300x250 AD
300x250 AD
Back to top