ಕಾರವಾರ: ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೇವಲ 5 ಕಿ.ಮಿ. ಕಾಮಗಾರಿ ಬಾಕಿ ಇದೆ ಎಂದು ಮಾಹಿತಿ ನೀಡುತ್ತಾರೆ. ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲ, ರಸ್ತೆ ಸಂಪೂರ್ಣ ಮುಕ್ತಾಯವಾಗಿಲ್ಲ, ಸೇತುವೆಗಳನ್ನು ಪೂರ್ಣಗೊಳಿಸಿಲ್ಲ. ಇದರಿಂದ ಅಪಘಾತಗಳು ಸಂಭವಿಸಿ ಜನರು ಮೃತ ಪಡುತ್ತಿದ್ದಾರೆ. ಅ.10 ರೊಳಗಾಗಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಸರ್ವೆ ಮಾಡಿ ವರದಿ ಸಲ್ಲಿಸುವಂತೆ ಐಆರ್‌ಬಿಐ ಅಧಿಕಾರಿಗಾಳಿಗೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಡವರ ಅರೋಗ್ಯ ಮತ್ತು ಆರ್ಥಿಕವಾಗಿ ಸಬಲೀಕರಣ ಹೊಂದಲು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೊಜನೆಗಳನ್ನು ಅರ್ಹ ಪಲಾನುಭವಿಗೆ ತಲುಪಿಸುವ ಕಾರ್ಯ ಮಾಡುವುದರ ಜೊತೆಗೆ ಜನಸಾಮಾನ್ಯರು ಕಚೇರಿಗೆ ಬಂದರೆ ಕೂಡಲೇ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುವುದು ಯಾವುದೇ ಕಾರಣಕ್ಕೂ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಉತ್ತಮ ಶಿಕ್ಷಣ ಒದಗಿಸಲು ಬೇಕಾದ ಎಲ್ಲಾ ಅಗತ್ಯ ನೆರವು ನೀಡಲಾಗುವದು ಎಂದರು.
ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ 77 ಮಕ್ಕಳು ಬಳಲುತ್ತಿದ್ದು, ಈ ಮಕ್ಕಳಿಗೆ ಎನ್ಆರ್‌ಸಿಯಲ್ಲಿ ದಾಖಲು ಪಡಿಸಿ ಇವರಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಹೃದಯಕ್ಕೆ ಸಂಬಂಧಿ ಸಮಸ್ಯೆಯಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚಿಸಿದ ಅವರು, ಬಡ ಮಕ್ಕಳ ರಕ್ಷಣೆಗೆ ಸರ್ಕಾರದಿಂದ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಈ ಯೋಜನೆಗಳನ್ನು ಬಡ ಮಕ್ಕಳಿಗೆ ತಲುಪಿಸಬೇಕು ಎಂದರು.
ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ 450 ಹಾಸಿಗೆಯ ಸೂಪರ್ ಸ್ಪೆಷಾಲಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಯು ನಿಗಧಿತ ಒಪ್ಪಂದದಂತೆ ಮುಕ್ತಾಯ ಹಂತದಲಿದ್ದು, ಎಂ.ಆರ್.ಐ ಯಂತ್ರವನ್ನು ಹೊರತುಪಡಿಸಿ ಉಳಿದ ಎಲ್ಲಾ ಸೂಪರ್ ಸ್ಪೆಷಾಲಟಿ ಆಸ್ಪತ್ರೆಗೆ ಬೇಕಾಗುವ ಯಂತ್ರೋಪಕರಣ ಇರುವ ಬಗ್ಗೆ ಜಿಲ್ಲಾ ಶಸ್ತç ಚಿಕಿತ್ಸಕರು ಮತ್ತು ವೈದ್ಯಕೀಯ ಅಧೀಕ್ಷರಿಂದ ಮಾಹಿತಿ ಪಡೆದು ಸಚಿವರು, ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ವೈದ್ಯರು ಮತ್ತು ಸಿಬ್ಬಂದಿಗಳು ಗೌರವದಿಂದ ಕಾಣುವುದರ ಜೊತೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಹಾಗೂ ಆಸ್ಪತ್ರೆಗೆ ಬರುವವರು ಬಡ ಜನತೆಯಾಗಿದ್ದು, ಅವರಿಗೆ ಚೀಟಿ ನೀಡಿ ಹೊರಗಡೆಯಿಂದ ಔಷಧ ಪಡೆಯಲು ತಿಳಿಸುವ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಂಡೋಸಲ್ಪಾನ್ ರೋಗಿಗಳಿಗೆ ಆರೋಗ್ಯ ಶಿಬಿರ ಮತ್ತು ಮಂಕಿಯಲ್ಲಿ 20 ಕೋಟಿ ವೆಚ್ಚದಲ್ಲಿ ಎಂಡೋಸಲ್ಪಾನ್ ಪೀಡಿತರ ವಸತಿ ನಿಲಯ ನಿರ್ಮಿಸುವ ಸಂಬಂಧಿಸಿದಂತೆ ನೀಲ ನಕ್ಷೆಯನ್ನು ಸಿದ್ದಪಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ ಸರ್ಕಾರ ಆಸ್ಪತ್ರೆಗೆ ಅನೇಕ ಸವಲತ್ತು ಕಲ್ಪಿಸಿದ್ದು, ವೈದ್ಯರು ನಿರ್ಲಕ್ಷೆ ಮಾಡದೇ ಉತ್ತಮ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಶಿರಸಿ ಸಿದ್ದಾಪುರದಲ್ಲಿ ಜೆಜಿಎಮ್ ಯೋಜನೆಯಡಿ ಅಳವಡಿಸಲಾದ ಕುಡಿಯುವ ನೀರಿನ ನಳದಲ್ಲಿ ಮಳೆಗಾಲದಲ್ಲಿ ಸಹ ನೀರು ಪೂರೈಕೆಯಾಗುತ್ತಿಲ್ಲ ಈ ಬಗ್ಗೆ ಪರಿಶೀಲಿಸಿ ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಎಸ್ ಅರ್ ಪಾಟೀಲ್, ವಿಧಾನ ಪರಿಷತ್ ಶಾಸಕ ಶಾಂತರಾಮ ಬುಡ್ನಾ ಸಿದ್ದಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.