Slide
Slide
Slide
previous arrow
next arrow

ಬೆಟ್ಟಕೊಪ್ಪದ ‘ರಾಗಾ’ ದಂಪತಿಗೆ ಪೂಗಾದಲ್ಲಿ ಸನ್ಮಾನ

300x250 AD

ರಾಘವೇಂದ್ರಗೆ ಮಾಧ್ಯಮ ಶ್ರೀ; ಸಾಯಿಮನೆಗೆ ಗೋಲ್ಡನ್ ಪೆನ್ | ಶಾಸಕ ಭೀಮಣ್ಣ, ಹೆಬ್ಬಾರ್, ಸಂಸದ ಕಾಗೇರಿ ಸೇರಿ ಗಣ್ಯರ ದಿವ್ಯ ಉಪಸ್ಥಿತಿ

ಶಿರಸಿ: ಯುವ ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಗಡಿಬಿಡಿಯಿಂದ ಹೊರ ಬಂದು ಅಧ್ಯಯನಶೀಲತೆ ಅಳವಡಿಸಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.

ಅವರು ಶನಿವಾರ ನಗರದ ಪೂಗಾ ಭವನದಲ್ಲಿ ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಹಿರಿಯ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ ಅವರಿಗೆ ನೀಡಲಾಗುವ ‘ಮಾಧ್ಯಮ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗದ ಜತೆ ಪ್ರತಿಕಾ ರಂಗವೂ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಅಧಿಕೃತವಾಗಿ ನಾಲ್ಕನೆ ಅಂಗ ಎಂದು ಕರೆಯಲ್ಪಡದಿದ್ದರೂ ಈ ಮೂರು ಅಂಗಗಳ ಜತೆ ಪತ್ರಿಕೋದ್ಯಮ ನಡೆದು ಬಂದಿದೆ. ಪತ್ರಿಕೋದ್ಯಮ ಬೆಳವಣಿಗೆಗೆ ಅನೇಕ ಹಿರಿಯರು ಶ್ರಮಿಸಿದ್ದು, ಆದರೆ ದಿನಕಳೆದಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆ ಪತ್ರಿಕಾ ರಂಗದ ತಪ್ಪುಗಳನ್ನು ಎತ್ತಿ ಹಿಡಿಯುವ ಸ್ಥಿತಿ ಬಂದಿದೆ. ಸಮಾಜದಲ್ಲಿಂದು ಎಲ್ಲ ಕ್ಷೇತ್ರದವರಿಗೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ‌ ಎಂದರು.

ಶಾಸಕಾಂಗ ಮೇಲ್ಪಂಕ್ತಿಯಲ್ಲಿರುವುದಕ್ಕೆ ಮಾಧ್ಯಮ ನೀಡಿದ ಸ್ಥಾನ ಕಾರಣ. ಜನ ಸಮುದಾಯದ ಮಾನಸಿಕ ಸ್ಥಿತಿಯನ್ನು ಅರಿತು ಕೆಲಸ ಮಾಡುವುದು ಸುಲಭವಲ್ಲ. ಮುದ್ರಣ ಮಾಧ್ಯಮದ ಕಾಲದಿಂದಲೂ ಇಲ್ಲಿಯವರೆಗೆ ಪತ್ರಿಕಾರಂಗದಲ್ಲಿ ಬಹಳ ಬದಲಾವಣೆಯಾಗಿದೆ. ರಾಷ್ಟ್ರದ ಬೆಳವಣಿಗೆಗೆ ಮಾಧ್ಯಮದ ಕೊಡುಗೆ ಅಪಾರವಾಗಿದೆ. ರಾಜ್ಯಮಟ್ಟದ ಪತ್ರಿಕೋದ್ಯಮಕ್ಕೆ ಉತ್ತರಕನ್ನಡ ಜಿಲ್ಲೆಯ ಕೊಡುಗೆ ಬಹಳಷ್ಟಿದೆ. ನಮ್ಮಲ್ಲಿ ಸ್ವಾತಂತ್ರ್ಯ, ಸ್ವಾವಲಂಬನೆ ಕಿಚ್ಚು ಹಚ್ಚಿದ್ದು ಮಾಧ್ಯಮ ಎಂದು ಹೇಳಿದರು.


ಪ್ರಶಸ್ತಿ ಪ್ರದಾನ ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಯಾವುದೇ ಅಪಮೌಲ್ಯದ ಆಗದ ರೀತಿಯಲ್ಲಿ ತೆಗೆದುಕೊಂಡು ಹೋಗುವುದು ಮಾಧ್ಯಮ. ಸಮಾಜಕ್ಕೆ ಸಂದೇಶಗಳನ್ನು ನೀಡುತ್ತ ಬಂದ ಮಾಧ್ಯಮದವರ ಕೊಡುಗೆಯನ್ನು ನಾವು ಮರೆಯಬಾರದು. ಪತ್ರಿಕಾರಂಗವು ಒಂದು ವಿಷಯಕ್ಕೆ ಬದ್ಧವಾಗದೇ ಸರ್ಕಾರ ಮತ್ತು ಸಾರ್ವಜನಿಕ ಕ್ಷೇತ್ರದ ತೊಂದರೆಯನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.
ಹಿರಿಯ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಅವರ ಹಲವು ವರ್ಷಗಳ ಸೇವೆಗೆ ಮಾಧ್ಯಮ ಶ್ರೀ ಪ್ರಶಸ್ತಿ ದೊರೆತಿದೆ. ಅದರಂತೆ ಸದಾ ಕ್ರಿಯಾಶೀಲರಾಗಿರುವ ಮಂಜುನಾಥ ಸಾಯಿಮನೆ ಅವರಿಗೆ ಗೋಲ್ಡನ್ ಪೇನ್ ಪುರಸ್ಕಾರ ದೊರೆತಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.

ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಮಾತನಾಡಿ, ಪತ್ರಕರ್ತರು ಕಟುಸತ್ಯವನ್ನು ನಿರ್ಭಿತಿಯಿಂದ ಬರೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಯಾರ ಒತ್ತಡಕ್ಕೂ ಮಣಿಯದೇ ಪತ್ರಿಕೋದ್ಯಮದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಅನೇಕ ಹಿರಿಯರನ್ನು ನಾವು ಕಾಣಬಹುದಾಗಿದೆ. ಹೆಚ್ಚು ಮೌಲ್ಯಯುತ ವಿಷಯಗಳಿಗೆ ಮಹತ್ವ ನೀಡಿ, ಮಾಧ್ಯಮಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ ವ್ಯವಸ್ಥೆ ಸರಿ ದಾರಿಯಲ್ಲಿ ಸಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರದ ಸಂಘದ ಜಿಲ್ಲಾಧ್ಯಕ್ಷ ಜಿ.ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ಇಂದಿನ ಕಾಲದಲ್ಲಿ ಓದುವಿಕೆ ಕಡಿಮೆಯಾಗಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ. ಪ್ರತಿಯೊಂದು ರಾಜಕಾರಣಿಗಳು ಪತ್ರಕರ್ತರಿಗೆ ಕಾಯುತ್ತಿದ್ದರು. ಇಂದು ಈ ಪ್ರಕ್ರಿಯೆ ನಿಂತುಹೋಗಿದೆ. ಸಮಾಜಕ್ಕೆ ನಾವು ನೀಡಬೇಕು ಎಂಬುದನ್ನು ಮನಗಂಡಾಗ ಪತ್ರಿಕಾರಂಗ ಸರಿಯಾದ ದಾರಿಯಲ್ಲಿ ನಡೆಯಬಲ್ಲದು ಎಂದರು.
ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಮಾತನಾಡಿ, ಸಂಘದ ಹಿರಿಯ ಪತ್ರಕರ್ತರನ್ನು ಗೌರವಿಸಬೇಕು ಎಂಬ ಉದ್ದೇಶದಿಂದ ಕಳೆದ ೬ ವರ್ಷಗಳ ಹಿಂದೆ ಮಾಧ್ಯಮ ಶ್ರೀ ಪ್ರಶಸ್ತಿ ನೀಡುವುದು ಆರಂಭಗೊಂಡಿತು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದ ಹಿರಿಯ ಪತ್ರಕರ್ತರಿಗೆ ಇದನ್ನು ನೀಡುತ್ತ ಬಂದಿದ್ದೇವೆ. ಪತ್ರಕರ್ತರು ಎಂದಿಗೂ ಸಾಮಾಜಿಕ ಕಳಕಳಿ ಹೊಂದಿದವರು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ದಂಪತಿಯನ್ನು ಅವರಿಗೆ ‘ಮಾಧ್ಯಮ ಶ್ರೀ’ ಪ್ರಶಸ್ತಿಯನ್ನು ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.
ಉತ್ಸಾಹಿ ಪತ್ರಕರ್ತ ಮಂಜುನಾಥ ಸಾಯಿಮನೆ ಅವರಿಗೆ ಗೋಲ್ಡನ್ ಪೇನ್ ಪುರಸ್ಕಾರ ನೀಡಲಾಯಿತು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಉಪಸ್ಥಿತರಿದ್ದರು. ಗಾಯಕಿ ರೇಖಾ ಸತೀಶ ಭಟ್ಟ ಪ್ರಾರ್ಥಿಸಿದರು. ಸ್ವರ್ಣವಲ್ಲಿ ಶ್ರೀಗಳ ಶುಭ ಸಂದೇಶವನ್ನು ಪ್ರವೀಣ ಹೆಗಡೆ ವಾಚಿಸಿದರು. ಸಂಘದ ಉಪಾಧ್ಯಕ್ಷ ವಿನುತಾ ಹೆಗಡೆ ಸ್ವಾಗತಿಸಿದರು. ರವಿ ಹೆಗಡೆ ಗಡಿಹಳ್ಳಿ ಸನ್ಮಾನ ಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ನಿರೂಪಿಸಿದರು. ಶಿವಪ್ರಸಾದ ಹಿರೇಕೈ ವಂದಿಸಿದರು. ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗ ನೀಡಿತ್ತು. ಒಂದು ಅಚ್ಚುಕಟ್ಟಾದ ಕಾರ್ಯಕ್ರಮಕ್ಕೆ ಪೂಗ ಭವನ ಹಾಗೂ ನೆರೆದಿದ್ದ ೨೫೦ಕ್ಕೂ ಅಧಿಕ ಓದುಗರು ಸಾಕ್ಷಿಯಾಗಿದ್ದರು. ಸಿದ್ದಾಪುರ, ಯಲ್ಲಾಪುರ, ಹುಬ್ಬಳ್ಳಿ, ಕುಮಟಾದಿಂದಲೂ ಓದುಗರು ಆಗಮಿಸಿದ್ದರು.


ಪತ್ರಕರ್ತರು ವರದಿಗಾರಿಕೆ‌ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಾಗ ಸಮಾಜದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯ. ಯುವ ಪತ್ರಕರ್ತರು ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಿ ಚಳುವಳಿ ಅರಿವಿರಬೇಕು.
ರಾಘವೇಂದ್ರ ಬೆಟ್ಟಕೊಪ್ಪ, ಮಾಧ್ಯಮ ಶ್ರೀ ಪ್ರಶಸ್ತಿ ಪುರಸ್ಕೃತ

300x250 AD


ಗ್ರಾಮೀಣ ಭಾಗದ ಪತ್ರಕರ್ತರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಉಚಿತ ಬಸ್ ಪಾಸ್ ಸೌಲಭ್ಯ ನೀಡಿದೆ. ಅದರಲ್ಲಿ ಕೆಲ ಮಾರ್ಪಾಟು ಆಗಬೇಕೆಂಬ ಒತ್ತಾಯವೂ ಕೇಳಿ ಬಂದಿದೆ. ಅದರ ಕುರಿತು ಮುಖ್ಯಮಂತ್ರಿ ಮತ್ತು ಸರ್ಕಾರದ ಗಮನಸೆಳೆಯುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪಕ್ಷ ಬೇಧ ಮರೆತು ಕೆಲಸ ಮಾಡುತ್ತೇವೆ.
ಭೀಮಣ್ಣ ನಾಯ್ಕ, ಶಾಸಕ


ವರದಿಗಾರರಿಗೆ ಪ್ರೌಢಿಮೆ, ಅಕ್ಷರ ಜೋಡಣೆ, ಭಾಷಾ ಶುದ್ಧತೆ, ವಾಕ್ಯ ಜೋಡಣೆ ಬಹಳ ಮುಖ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲಿಯೂ ಸ್ಪರ್ಧೆ ಇರುವುದು ಸಹಜ. ಸಾಮಾಜಿಕ ಜಾಲತಾಣಗಳು ಬಹಳ ಮುಂದುವರೆದಿದ್ದು, ಬ್ರೇಕಿಂಗ್ ಸುದ್ದಿ ನೀಡುವ ಭರಾಟೆಯಲ್ಲಿ ಅನೇಕ ತಪ್ಪುಗಳನ್ನು ನಾವು ಕಾಣುತ್ತೇವೆ. ಆದರೆ ಮುದ್ರಣ ಮಾಧ್ಯಮ ಇನ್ನೂ ತನ್ನ ಗೌರವವನ್ನು ಕಾಪಾಡಿಕೊಂಡು ಬಂದಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ

ಜಿಲ್ಲೆಯ ಪತ್ರಿಕೋದ್ಯಮಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಪ್ರಾಮಾಣಿಕತೆ, ಬದ್ದತೆ ಉಳಿಸಿಕೊಂಡು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು.–ಶಿವರಾಮ ಹೆಬ್ಬಾರ್, ಶಾಸಕ

ಪತ್ರಕರ್ತರು ಬದ್ಧತೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಜಿಲ್ಲಾ ಪತ್ರಿಕಾ‌ ಮಂಡಳಿಗೆ ಸುವರ್ಣ ಸಂಭ್ರಮ
ಜಿ.ಸುಬ್ರಾಯ ಭಟ್ಟ ಬಕ್ಕಳ, ಅಧ್ಯಕ್ಷರು ಜಿಲ್ಲಾ ಪತ್ರಿಕಾ ‌ಮಂಡಳಿ, ಶಿರಸಿ


ಪತ್ರಕರ್ತರಿಗೆ ಆರೋಗ್ಯ ವಿಮೆ:
ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಜೀವ ವಿಮೆ ಅಥವಾ ಆರೋಗ್ಯ ವಿಮೆಯ ಸೌಲಭ್ಯ ಒದಗಿಸಬೇಕೆಂಬ ಚಿಂತನೆ ನಡೆದಿದೆ. ಇದನ್ನು ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸಲು ಸಂಘದಿಂದ ಪ್ರಯತ್ನ ನಡೆಸುತ್ತೇವೆ
ಸಂದೇಶ ಭಟ್ಟ ಬೆಳಖಂಡ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ

ತ್ರಿವಳಿ ಸಂಗಮ!
ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದ ಮೂವರು ಒಂದೇ ವೇದಿಕೆಯಲ್ಲಿ! ಸಂಸದ ಕಾಗೇರಿ, ಶಾಸಕರಾದ‌ ಹೆಬ್ಬಾರ್, ಭೀಮಣ್ಣ ನಾಯ್ಕ ಅವರು ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದಾಗಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಕಾಗೇರಿ‌ ಮಾತನಾಡುವಾಗ ನಾನೊಬ್ಬವ, ನೀವು ಇಬ್ಬರು ಎಂದು ಹಾಸ್ಯ ಚಟಾಕಿ ಹಾರಿಸಿದರೆ, ಖುರ್ಚಿ ವಿಚಾರದಲ್ಲಿ ಅಭಿಪ್ರಾಯ ಬೇಧ ಇದ್ದರೂ ಅಭಿವೃದ್ಧಿಗೆ ಬದ್ಧರು ಎಂದು ಹೆಬ್ಬಾರ್ ಸಮರ್ಥಿಸಿದರು. ನಾವು ಮೂವರೂ ಕ್ಷೇತ್ರದ ಅಭಿವೃದ್ದಿಯಲ್ಲಿ ಒಂದಾಗಿ ಕೆಲಸ ಮಾಡುತ್ತೇವೆ ಎಂದು ಭೀಮಣ್ಣ ಹೇಳಿದರು. ಮೂವರೂ ಒಂದಾಗಿ ಅಭಿವೃದ್ದಿ ಜೊತೆ ಜನರ ಹಿತ ಕಾಯಲಿ ಎಂಬುದು ನೆರೆದಿದ್ದ ಪ್ರೇಕ್ಷಕರ ಅಭಿಮತವಾಗಿತ್ತು.

Share This
300x250 AD
300x250 AD
300x250 AD
Back to top