Slide
Slide
Slide
previous arrow
next arrow

ಭುವನೇಶ್ವರಿ ದೇವಾಲಯದಲ್ಲಿ ಅ.3ರಿಂದ ಶರನ್ನವರಾತ್ರಿ ಉತ್ಸವ

300x250 AD

ಸಿದ್ದಾಪುರ: ತಾಲ್ಲೂಕಿನ ಭವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಅ.3ರ ಗುರುವಾರದಿಂದ ಅ.12ರ ಶನಿವಾರದವರೆಗೆ ಶರನ್ನವರಾತ್ರಿ ಉತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜುಗೋಡು ಹೇಳಿದರು.

ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ, ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶನಿವಾರ ಅವರು ಮಾಹಿತಿ ನೀಡಿದರು. ಪ್ರತಿ ವರ್ಷದಂತೆ ಒಂಬತ್ತು ದಿನಗಳ ಕಾಲ ನಡೆಯುವ ಶರನ್ನವರಾತ್ರಿ ಉತ್ಸವವನ್ನು ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದೇವೆ. ಪ್ರತಿದಿನ ಬೆಳಿಗ್ಗೆ ಸಂಕಲ್ಪ, ಪೂಜೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಸಪ್ತಶತಿ ಪಾರಾಯಣ ನಡೆಯಲಿದ್ದು, ಸಂಜೆ ವಿಶೇಷ ಅಲಂಕಾರಗಳೊಂದಿಗೆ ಮಹಾಪೂಜೆ ನಡೆಯುತ್ತದೆ. ಅ. 12ರ ಶನಿವಾರ ವಿಜಯದಶಮಿ ದಿನದಂದು ಬನ್ನಿ ಪೂಜೆ, ಸೀಮೋಲ್ಲಂಘನ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆಯೊಂದಿಗೆ ಶರನ್ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ ಎಂದರು.

300x250 AD

ಸುಷಿರ ಸಂಗೀತ ಪರಿವಾರದ ಸಂಯೋಜಕ ನಾರಾಯಣ ಹೆಗಡೆ ಕಲ್ಲಾರೆಮನೆ ಮಾತನಾಡಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಸುಷಿರ ಸಂಗೀತ ಪರಿವಾರ ಕಲ್ಲಾರೆಮನೆ ಇವರ ಸಂಯೋಜನೆಯಲ್ಲಿ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ ಆರರಿಂದ ಎಂಟು ಗಂಟೆಯವರೆಗೆ ನಡೆಯಲಿದ್ದು, ಅ.3 ರಂದು ಭಜನೆ, 4ರ ಶುಕ್ರವಾರದಂದು ಲಘು ಶಾಸ್ತ್ರಿಯ ಮತ್ತು ಭಕ್ತಿ ಸಂಗೀತ, ಅ. 5ರ ಶನಿವಾರ ತಾಳಮದ್ದಲೆ, ಅ. 6ರ ರವಿವಾರ ಭಜನೆ ಮತ್ತು ಭರತನಾಟ್ಯ, ಅ. 7ರಂದು ಲಘು ಶಾಸ್ತ್ರಿಯ ಮತ್ತು ಭಕ್ತಿ ಸಂಗೀತ, ಅ. 8ರ ಮಂಗಳವಾರ ಭರತನಾಟ್ಯ ಮತ್ತು ಭಕ್ತಿ ಸಂಗೀತ, ಅ. 9, 10 ಮತ್ತು 11 ರಂದು ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ಕೋರಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯ ಜಯರಾಮ ಭಟ್ ಗುಂಜಗೋಡು, ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ, ಒಡ್ಡೋಲಗ ಹಿತ್ಲಕೈ ಮುಖ್ಯಸ್ಥ ಗಣಪತಿ ಹೆಗಡೆ ಇದ್ದರು.
ಸಿದ್ದಾಪುರ ತಾಲ್ಲೂಕಿನ ಭವನಗಿರಿಯ ಶ್ರೀ ಭುವನೇಶ್ವರಿ ದೇವಾಲಯದಲ್ಲಿ ನಡೆಯುವ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜುಗೋಡು ಬಿಡುಗಡೆಗೊಳಿಸಿದರು.

Share This
300x250 AD
300x250 AD
300x250 AD
Back to top