ಸಂಘಕ್ಕೆ ಅಮೃತ ಮಹೋತ್ಸವದ ಸಂಭ್ರಮ: ಅ.25ಕ್ಕೆ ಸಮಾರೋಪ ಸಮಾರಂಭ
ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘವು 2023-24ನೇ ಸಾಲಿನಲ್ಲಿ 81.41ಲಕ್ಷ ರೂಗಳಷ್ಟು ಲಾಭ ಗಳಿಸಿದ್ದು ಸದಸ್ಯರಿಗೆ ಶೇ.12ಲಾಭಾಂಶ ನೀಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಹೇಳಿದರು.
ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಶನಿವಾರ ಮಾತನಾಡಿದರು.ಸಂಘದಲ್ಲಿ 1630ಜನ ಷೇರು ದಾರ ಸದಸ್ಯರಿದ್ದು ಶೇರು ಬಂಡವಾಳ 2ಕೋಟಿ 70ಲಕ್ಷ ರೂಗಳಷ್ಟು ಷೇರು ಬಂಡವಾಳ ಹೊಂದಿದೆ.ಸಂಘದ ಏಳಿಗೆಯ ಜತೆಗೆ ಸದಸ್ಯರ ಹಿತ ಕಾಪಾಡುವುದು ಮುಖ್ಯವಾಗಿದೆ.ಸದಸ್ಯರ ಹಿತ ಕಾಪಾಡುತ್ತ 75 ವಸಂತಗಳನ್ನು ಪೂರ್ಣಗೊಳಿಸಿದೆ. ಈ ವರ್ಷ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ಅ. 25ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಅಡಕೆ ಎಲೆಚುಕ್ಕೆ ರೋಗದ ಸಮಸ್ಯೆ ಕಾಡುತ್ತಿದ್ದು ಸದಸ್ಯರು ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಆರ್ಥಿಕ ಮಿತವ್ಯಯ ಸಾಧಿಸಬೇಕಾಗಿದೆ.ಸಂಘದ ಮೂಲಕವೇ ಸದಸ್ಯರು ಮಹಸೂಲು ವಿಕ್ರಿಮಾಡುವಂತೆ ವಿನಂತಿಸಿ ಸದಸ್ಯರಿಗೆ ಬೇಕಾಗುವ ಎಲ್ಲ ಬಗೆಯ ವಸ್ತುಗಳನ್ನು ಒಂದೇ ಸೂರಿನಡಿಯಲ್ಲಿ ಖರೀದಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಉಪಾಧ್ಯಕ್ಷ ಚೌಡು ಗೌಡ ಬಿಳೆಕಲ್ಮನೆ, ಸದಸ್ಯರಾದ ಸುಬ್ರಾಯ ಹೆಗಡೆ ಸಾಯಿಮನೆ, ಗಣಪತಿ ಹೆಗಡೆ ಹಿರೇಹದ್ದ, ಲಕ್ಷ್ಮಣ ಗೌಡ ಕುಳಿಕಟ್ಟು, ಚಂದ್ರಶೇಖರ ಗೌಡ ದಿಗೋಡಿ, ಮಂಜ ಹರಿಜನ ಹುಲ್ಲುಂಡೆ, ನೇತ್ರಾವತಿ ಭಟ್ಟ ಹೊಸ್ತೋಟ, ವಿಮಲಾ ನಾಯ್ಕ ಹೆಗ್ಗರಣಿ ಉಪಸ್ಥಿತರಿದ್ದರು. ನಿರ್ದೇಶಕ ಶ್ರೀಪತಿ ಹೆಗಡೆ ಗೋಳಿಕೈ ಸ್ವಾಗತಿಸಿದರು,ಮುಖ್ಯಕಾರ್ಯನಿರ್ವಾಹಕ ಚಿದಂಬರ ಎಂ. ನಾಯ್ಕ ವರದಿವಾಚಿಸಿದರು. ನಿರ್ದೇಶಕ ಮಹಾಬಲೇಶ್ವರ ಹೆಗಡೆ ವಟರಜಡ್ಡಿ ವಂದಿಸಿದರು.ಎಲ್ಲ ಸಿಬ್ಬಂದಿಗಳು ಸಹಕರಿಸಿದರು.