ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ
ಸಿದ್ದಾಪುರ: ಭುವನಗಿರಿಯಿಂದ ಕೊಂಡೊಯ್ಯುವ ಕನ್ನಡ ಜ್ಯೋತಿಯಿಂದ ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯಾಗುತ್ತಿರುವುದು ಸಂತಸವಾಗಿದೆ. ನಾಡದೇವತೆ ಭುವನಗಿರಿಯ ಭುವನೇಶ್ವರಿ ದೇವಿಯ ಸ್ಥಳ ಅತ್ಯಂತ ಶೃದ್ಧಾಕೇಂದ್ರವಾಗಿದೆ. ಕಳೆದ ವರ್ಷದಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಭುವನಗಿರಿಯಿಂದ ತಂದ ಕನ್ನಡ ಜ್ಯೋತಿಯಿಂದ ನಡೆಯುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ ಜೋಶಿ ಹೇಳಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮದ ಕನ್ನಡ ಜ್ಯೋತಿ ರಥ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭುವನಗಿರಿಯಿಂದಲೇ ಕನ್ನಡ ಜ್ಯೋತಿಯನ್ನು ಕೊಂಡೊಯ್ಯಲಾಗಿತ್ತು. ಸಮ್ಮೇಳನವೂ ಅಭೂತಪೂರ್ವ ಯಶಸ್ಸನ್ನು ಕಂಡಿದ್ದು ರಾಜ್ಯಪಾಲರಿಂದಲೂ ಉಲ್ಲೇಖಿಸಲ್ಪಟ್ಟಿದೆ. ಡಿ.20, 21 ಹಾಗೂ 22ರಂದು ಮಂಡ್ಯದಲ್ಲಿ ನಡೆಯುವ 87ನೇ ಸಮ್ಮೆಳನ ಒಂದು ದೊಡ್ಡಸವಾಲಾಗಿದ್ದು ಹಾಗೂ ಅವಕಾಶವೂ ಆಗಿದೆ. ಸಮ್ಮೆಳನದ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯವಶ್ಯ. ಸೆ.22ರಂದು ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು.ಬೆಳಗ್ಗೆ 9ಕ್ಕೆ ಪೂಜೆ ನಡೆಯಲಿದೆ. ನಂತರ ಸಭಾಕಾರ್ಯಕ್ರಮ, 11ಕ್ಕೆ ಕನ್ನಡ ಜ್ಯೋತಿ ರಥಕ್ಕೆ ಚಾಲನೆ ನೀಡಲಾಗುವುದು. ಕನ್ನಡ ಜ್ಯೋತಿಯ ರಥಯಾತ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ದಿನ ಸಂಚರಿಸಲಿದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ತಹಸೀಲ್ದಾರ ಎಂ.ಆರ್. ಕುಲಕರ್ಣಿ, ಇಒ ದೇವರಾಜ್ ಹಿತ್ತಲಕೊಪ್ಪ, ಪಪಂ ಮುಖ್ಯಾಧಿಕಾರಿ ಜಗದೀಶ್ ಆರ್. ನಾಯ್ಕ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ. ಎನ್. ವಾಸರೆ, ಸಿಪಿಐ ಕುಮಾರ್ ಕೆ ಇತರರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಸ್ವಾಗತಿಸಿದರು.